ಕುಶಾಲನಗರ, ಆ. 31: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಸಾಕಾನೆಗಳ ಎರಡನೇ ತಂಡ ಕುಶಾಲನಗರದ ಆನೆಕಾಡು ಶಿಬಿರದಿಂದ ಕಳುಹಿಸಿಕೊಡಲಾಯಿತು. 4 ಆನೆಗಳಾದ ಗೋಪಿ, ಪ್ರಶಾಂತ್, ವಿಕ್ರಂ, ಹರ್ಷ ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ದುಬಾರೆ ಸಾಕಾನೆ ಶಿಬಿರದಿಂದ 6 ಆನೆಗಳು ಮೈಸೂರಿಗೆ ತೆರಳುತ್ತಿದ್ದು ಕಾವೇರಿ ಮತ್ತು ವಿಜಯ ಆನೆಗಳು ಮೈಸೂರಿನಲ್ಲಿ ತಾಲೀಮಿನಲ್ಲಿ ತೊಡಗಿವೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಆನೆಗಳು ದಸರಾದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಆನೆಗಳ ಜೊತೆಗೆ ಶಿಬಿರದ ಜಾಮೆದಾರ್ ರಾಜಮಣಿ, ಮಾವುತರಾದ ಅಪ್ಪಯ್ಯ, ಚಿನ್ನಪ್ಪ, ಸಂಜು, ಸಿಕ್ಕ ಸೇರಿದಂತೆ 8 ಮಂದಿ ಸಿಬ್ಬಂದಿಗಳು, ಕುಟುಂಬ ಸದಸ್ಯರು ತೆರಳಿದ್ದಾರೆ.

ಈ ಸಂದರ್ಭ ಕುಶಾಲನಗರ ಅರಣ್ಯ ವಲಯಾಧಿಕಾರಿ ಅರುಣ್, ಕೆ.ವಿ.ಶಿವರಾಂ, ಉಪ ಅರಣ್ಯ ವಲಯಾಧಿಕಾರಿ ರಂಜನ್, ದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಲತೀಫ್, ಮಾಜಿ ಸದಸ್ಯರುಗಳಾದ ರಾಜಾರಾವ್, ಆರ್.ಕೆ. ಚಂದ್ರ ಇದ್ದರು.