ಸೋಮವಾರಪೇಟೆ, ಆ. 31: ಮಾನಸಿಕ ಅಸ್ವಸ್ಥನಂತೆ ನಗರದಲ್ಲಿ ಸಂಚರಿಸುತ್ತಾ ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿದ್ದ ಯುವಕನನ್ನು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರಿನ ನಿಮ್ಹಾನ್ಸ್‍ಗೆ ಸೇರಿಸಿದ್ದಾರೆ.

ಜನತಾ ಕಾಲೋನಿಯ ಯುವಕ ಕಿರಣ್, ಮಳೆ ಬಿಸಿಲೆನ್ನದೆ ನಗರದಲ್ಲಿ ಸಂಚರಿಸುತ್ತಿದ್ದ. ಕೆಲವೊಮ್ಮೆ ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿದ್ದ ಈತ ಹಲವು ಮಂದಿಯ ಮೇಲೂ ಹಲ್ಲೆ, ಈತನ ಮೇಲೂ ಹಲವರು ಹಲ್ಲೆ ನಡೆಸುತ್ತಿದ್ದರು.

ಈ ಕಿರುಕುಳದ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದ್ದು, ಪೊಲೀಸರು ಚಿಕಿತ್ಸೆ ನೀಡುವಂತೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ದೀಪಕ್ ಸೇರಿದಂತೆ ಪದಾಧಿಕಾರಿಗಳು, ಈ ಯುವಕನನ್ನು ಇಂದು ತಮ್ಮದೇ ವಾಹನದಲ್ಲಿ ಮಡಿಕೇರಿಗೆ ಕರೆದೊಯ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಯ ಮಾನಸಿಕ ತಜ್ಞ ರೂಪೇಶ್ ಸಲಹೆಯಂತೆ ಬೆಂಗಳೂರಿನ ನಿಮ್ಹಾನ್ಸ್‍ಗೆ ಯುವಕನ ತಾಯಿಯೊಂದಿಗೆ ಕರವೇ ಕಾರ್ಯಕರ್ತ ಸಂತೋಷ್ ಕಿರಣ್‍ನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದರು.

ಕರ್ನಾಟಕ ರಕ್ಷಣಾ ವೇದಿಕೆಯ ನಗರಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ದೀಪಕ್, ಪದಾಧಿಕಾರಿಗಳಾದ ರವೀಶ್, ಅಬ್ಬಾಸ್, ಬೇಟು, ಹರೀಶ್, ವಿವೇಕಾನಂದ ಯುವ ಬ್ರಿಗೇಡ್‍ನ ಅಭಿಷೇಕ್ ಅವರುಗಳು ಯುವಕನ ನೆರವಿಗೆ ಧಾವಿಸಿ, ಬೆಂಗಳೂರಿಗೆ ಕಳುಹಿಸಿಕೊಟ್ಟರು. ಯುವಕನಿಗೆ ಕನಿಷ್ಟ ಮೂರು ತಿಂಗಳ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.