ಮಡಿಕೇರಿ, ಆ. 31 : ವಿಯೆಟ್ನಾಂನಿಂದ ಆಮದಾಗುತ್ತಿರುವ ಕಾಳುಮೆಣಸು ವ್ಯವಹಾರವನ್ನು ಕಾನೂನಿನ ಚೌಕಟ್ಟಿನಡಿ ಸ್ಥಗಿತಗೊಳಿಸುವಂತೆ ಮನವಿ ಮಾಡಲು ಕೇಂದ್ರದ ವಾಣಿಜ್ಯ ಸಚಿವರ ಬಳಿಗೆ ಸಂಸದ ಪ್ರತಾಪ ಸಿಂಹ ಅವರ ನೇತೃತ್ವದಲ್ಲಿ ನಿಯೋಗ ತೆರಳಲು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಅಧ್ಯಕ್ಷ ಸುವಿನ್ ಗಣಪತಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ನಾಮ ನಿರ್ದೇಶಿತ ಸದಸ್ಯರು ವಿಯೆಟ್ನಾಂನ ಕಾಳುಮೆಣಸು ಆಮದಿನ ಕುರಿತು ಮಾಡಿರುವ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದರು. ಸಮಿತಿಯು ಕೊಡಗಿನ ರೈತರ ಪರವಾಗಿದ್ದು, ವಿಯೆಟ್ನಾಂ ಕರಿಮೆಣಸು ಆಮದಾಗುವದನ್ನು ತಡೆಯಲು ರೈತರ ಪರವಾದ ಹೋರಾಟಕ್ಕೆ ತಮ್ಮ ಸಂಪÀÇರ್ಣ ಬೆಂಬಲವಿದೆ ಎಂದು ತಿಳಿಸಿದರು.

ರೋಸ್ ಮೇರಿ ಇಂಟರ್‍ನ್ಯಾಷನಲ್ ಸಂಸ್ಥೆ ಗೋಣಿಕೊಪ್ಪ ಎಪಿಎಂಸಿ ಆವರಣದಲ್ಲಿ ಶಾಖಾ ಕಛೇರಿಯನ್ನು ಹೊಂದಿ ವಿಯೆಟ್ನಾಂ ಕಾಳುಮೆಣಸಿನ ವ್ಯವಹಾರ ನಡೆಸುತ್ತಿದೆ. ಆಮದುದಾರರು

(ಮೊದಲ ಪುಟದಿಂದ) ಹಾಗೂ ರಫ್ತುದಾರರ ಲೈಸೆನ್ಸ್ ಪಡೆದು ಅಂತರಾಷ್ಟ್ರೀಯ ವ್ಯಾಪಾರ ನಿಯಮದಡಿ ಅಧಿಕೃತವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಈ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಅಧಿಕಾರ ಎಪಿಎಂಸಿಗೆ ಇರುವದಿಲ್ಲ. ಆಮದನ್ನು ತಡೆಯಲು ಕೇಂದ್ರ ಸರ್ಕಾರವಷ್ಟೆ ಕ್ರಮ ಕೈಗೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರದ ವಾಣಿಜ್ಯ ಸಚಿವರ ಗಮನ ಸೆಳೆÉಯಲು ಎಲ್ಲಾ ಪ್ರಯತ್ನಗಳು ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಅವರ ಸಲಹೆಯಂತೆ ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸಿದ್ದು, ಕೇಂದ್ರದ ವಾಣಿಜ್ಯ ಸಚಿವರನ್ನು ಭೇಟಿಯಾಗಲು ಸಂಸದ ಪ್ರತಾಪ ಸಿಂಹ ಅವರ ಮೂಲಕ ದಿನಾಂಕವನ್ನು ಕೂಡ ಗೊತ್ತು ಪಡಿಸಲಾಗಿದೆ. ಸೆಪ್ಟೆಂಬರ್ 7 ರ ನಂತರ ಕೇಂದ್ರ ಸಚಿವರನ್ನು ಭೇಟಿಯಾಗಿ ವಿಯೆಟ್ನಾಂ ಕಾಳು ಮೆಣಸು ಆಮದಾಗುವದನ್ನು ತಡೆಯುವಂತೆ ಮನವಿ ಮಾಡಿಕೊಳ್ಳಲಾಗುವದೆಂದು ತಿಳಿಸಿದರು.

ಎಪಿಎಂಸಿ ನಾಮ ನಿರ್ದೇಶಿತ ಸದಸ್ಯರು ರಾಜಕೀಯ ದುರುದ್ದೇಶದಿಂದ ಆಡಳಿತ ಮಂಡಳಿಯ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಆದರೆ, ವಿಯೆಟ್ನಾಂನಿಂದ ಕಾಳುಮೆಣಸು ಆಮದಾಗುವದರ ಸಾಧಕ ಬಾಧಕಗಳ ಬಗ್ಗೆ ಸಭೆಯಲ್ಲಿ ತಾನೇ ಮೊದಲು ಪ್ರಸ್ತಾಪಿಸಿದ್ದೆ ಎಂದು ಸುವಿನ್ ಗಣಪತಿ ದಾಖಲೆಗಳ ಮೂಲಕ ಸ್ಪಷ್ಟಪಡಿಸಿದರು.

ಎಪಿಎಂಸಿ ಆವರಣದಲ್ಲಿರುವ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರುವ ಗೋದಾಮನ್ನು ಬಳಸಿಕೊಳ್ಳಲು ಯಾರೂ ಅರ್ಜಿ ಸಲ್ಲಿಸದ ಕಾರಣ ರೋಸ್ ಮೇರಿ ಇಂಟರ್‍ನ್ಯಾಷನಲ್ ಸಂಸ್ಥೆಗೆ ತಾತ್ಕಾಲಿಕವಾಗಿ ಗೋದಾಮನ್ನು ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು. ನಾಮ ನಿರ್ದೇಶಿತ ಸದಸ್ಯರು ಮಾಹಿತಿಯ ಕೊರತೆಯಿಂದಾಗಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಜಿಲ್ಲೆಯ ರೈತರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನ ಮಾಡಿದ್ದಾರೆ. ಇದನ್ನು ಖಂಡಿಸುವದಾಗಿ ತಿಳಿಸಿದ ಅವರು, ಗೋಣಿಕೊಪ್ಪ ಎಪಿಎಂಸಿ ರೈತರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಯಾವದೇ ರೀತಿಯ ಹೋರಾಟಕ್ಕೂ ಸಿದ್ಧವೆಂದರು. ರೈತರ ಅಭ್ಯುದಯಕ್ಕಾಗಿ ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಈಗಾಗಲೇ ಮುಂದಾಗಿರುವದಾಗಿ ಮಾಹಿತಿ ನೀಡಿದರು.

“ಸ್ಪೈಸಸ್ ಪಾರ್ಕ್” ಸ್ಥಾಪನೆ

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣವು ಅಂದಾಜು 10.03 ಏಕರೆ ಹೊಂದಿದ್ದು, ಮುಖ್ಯ ಮಾರುಕಟ್ಟೆ ಪ್ರಾಂಗಣದ ಒಳಗೆ “ಸ್ಪೈಸಸ್ ಪಾರ್ಕ್”ನ್ನು ತೆರೆಯಲು ತೀರ್ಮಾನಿಸಲಾಗಿದೆ. ಸ್ಪೈಸಸ್ ಪಾರ್ಕ್ ಈ ಸಮಿತಿಯ ಆವರಣದಲ್ಲಿ ನಿರ್ಮಾಣವಾದರೆ ಉತ್ತಮ ಗುಣಮಟ್ಟದ ಕಾಳುಮೆಣಸನ್ನು ಉತ್ಪತ್ತಿ ಮಾಡಲು ಅವಕಾಶವಿದ್ದು, ರೈತ ಬೆಳೆಗೆ ಉತ್ತಮ ಬೆಲೆ ದೊರೆಯಲಿದೆ. ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತಂದಿರುವ ಜಿ.ಎಸ್.ಟಿ ಯೋಜನೆಯ ಪ್ರಕಾರ ಹಾಗೂ ಕೃಷಿ ಮಾರಾಟ ಇಲಾಖೆಯು ಜಾರಿಗೆ ತಂದಿರುವ ಏಕೀಕೃತ ಮಾರುಕಟ್ಟೆಯಿಂದಾಗಿ ಈಗಾಗಲೇ ಎಲ್ಲಾ ವ್ಯಾಪಾರ ವಹಿವಾಟು ಆನ್‍ಲೈನ್ ಮೂಲಕವೇ ನಡೆಯುತ್ತಿದೆ. ಇದರಿಂದ ಯಾವದೇ ರೀತಿಯ ಅವ್ಯವಹಾರಗಳು ನಡೆಯಲು ಸಾಧ್ಯವಿಲ್ಲವೆಂದು ಸುವಿನ್ ಗಣಪತಿ ಸ್ಪಷ್ಟಪಡಿಸಿದರು.

ಮಡಿಕೇರಿಯ ಹಾಪ್‍ಕಾಮ್ಸ್ ಸಂಸ್ಥೆಯವರಿಗೂ ವಾಣಿಜ್ಯ ಮಳಿಗೆ ಹಾಗೂ ಗೋದಾಮನ್ನು ಶೇಕಡ 50ರ ರಿಯಾಯಿತಿ ದರದಲ್ಲಿ ನೀಡಿದ್ದು, ರೈತರು ಬೆಳೆದ ಬಾಳೆಕಾಯಿ, ಬಟರ್‍ಫ್ರೂಟ್, ಹಣ್ಣು- ಹಂಪಲುಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಧಾರಣೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿಯಿತ್ತರು.

ಕೃಷಿ ಮಾರಾಟ ಇಲಾಖೆ ಸಮಿತಿಗೆ 1.56 ಕೋಟಿ ರೂ.ಗಳ ಮಾರುಕಟ್ಟೆ ಶುಲ್ಕದ ಗುರಿಯನ್ನು ನಿಗಧಿಪಡಿಸಿದ್ದು, ಈಗಾಗಲೇ ರೂ. 70,48,341 ವಸೂಲಿಯಾಗಿರುತ್ತದೆ ಎಂದರು.

ಸಮಿತಿಯ ವ್ಯವಹಾರ ಕ್ಷೇತ್ರದ ಪ್ರತಿನಿಧಿ ಕಿಲನ್ ಗಣಪತಿ ಮಾತನಾಡಿ, 2005ರಿಂದಲೂ ರೋಸ್ ಮೇರಿ ಇಂಟರ್ ನ್ಯಾಷನಲ್ ಸಂಸ್ಥೆಗೆ ವ್ಯವಹಾರಕ್ಕೆ ಗೋದಾಮನ್ನು ಬಿಟ್ಟುಕೊಡಲಾಗಿದೆ ಎಂದರು. ಆಮದು ವ್ಯವಹಾರವನ್ನು ನಿಯಂತ್ರಿಸುವದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಈ ಸಮಸ್ಯೆಗೆ ಕೇಂದ್ರದಿಂದಲೆ ಪರಿಹಾರ ದೊರಕಬೇಕಾಗಿದೆ ಎಂದರು. ಆಮದಿನಿಂದ ಕೊಡಗಿನ ಕಾಳುಮೆಣಸಿನ ಗುಣಮಟ್ಟಕ್ಕೆ ಯಾವದೇ ಧಕ್ಕೆಯಾಗಿಲ್ಲವೆಂದ ಕಿಲನ್ ಗಣಪತಿ ಕಲಬೆರಕೆಯಾಗಿದ್ದರೆ ಸಾಬೀತುಪಡಿಸಲಿ ಎಂದು ಒತ್ತಾಯಿಸಿದರು.

ಗೋಣಿಕೊಪ್ಪ ಎಪಿಎಂಸಿ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಾ ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸದಸ್ಯ ಸುಜಾ ಪÀÇಣಚ್ಚ ಮಾತನಾಡಿ, ನಾಮ ನಿರ್ದೇಶಿತ ಸದಸ್ಯರು ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಸದಸ್ಯರುಗಳಾದ ವಿನು ಚಂಗಪ್ಪ, ಪ್ರವೀಣ್ ಮುತ್ತಪ್ಪ ಹಾಗೂ ಸಿ. ಸುಬ್ರಮಣಿ ಉಪಸ್ಥಿತರಿದ್ದರು.