ಮಡಿಕೇರಿ, ಆ.31 : ಆದರ್ಶ ಆಡಳಿತಗಾರ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿ ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಗುರುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ನಡೆಯಿತು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿ ದಂತಹ ಮಹಾನ್ ಪುರುಷರು. ಮೊದಲನೇ ಬಾರಿಗೆ ಕೊಡಗಿನಲ್ಲಿ ಕೆಂಪೇಗೌಡರ ಜಯಂತಿ ಆಚರಿಸುತ್ತಿರುವದು ಸಂತಸ ತಂದಿದೆ ಎಂದರು.

ಕೆಂಪೇಗೌಡರ ವ್ಯಕ್ತಿತ್ವವನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳುವಂತೆ, ಸೋದರಭಾವದಲ್ಲಿ ಜೀವಿಸಬೇಕು ಎಂದು ಅವರು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ತಲಕಾಡು ಪ್ರೊ. ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡರು ವಿಜಯನಗರ ಅರಸರ ಆಳ್ವಿಕೆಯಲ್ಲಿ ಸಾಮಂತರಾಗಿ ಆಡಳಿತ ನಡೆಸುತ್ತಿದ್ದರು.

(ಮೊದಲ ಪುಟದಿಂದ) ಕೆಂಪೇಗೌಡರು 48 ಅಗ್ರಹಾರಗಳನ್ನು ಸ್ಥಾಪಿಸಿದರು. ನಾಡು ಕಟ್ಟುವಲ್ಲಿ ಶ್ರಮಿಸಿದರು. ವರ್ತಕರಿಗೆ ಪ್ರೋತ್ಸಾಹ ನೀಡಿ ಆಡಳಿತದಲ್ಲಿ ಜನಪರವಾಗಿ ಕಾರ್ಯ ನಿರ್ವಹಿಸಿದರು. ಕೆಂಪೇಗೌಡರು ನೀರಾವರಿ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಿ ರೈತರಿಗೆ ಅನುಕೂಲವಾಗುವಂತೆ ಕೆರೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿ ರೈತರ ಶ್ರೇಯಸ್ಸಿಗೆ ಶ್ರಮಿಸಿದರು. ಕೆಂಪೇಗೌಡರು ನಿರ್ಮಿಸಿದ ಅಗ್ರಹಾರಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿದರೆ ಅವರ ಬಗ್ಗೆ ಹೆಚ್ಚು ವಿಚಾರ ತಿಳಿಯುತ್ತದೆ ಎಂದು ಹೇಳಿದರು.

ಇವರ ಶಾಸನಗಳ ಅಧ್ಯಯನದಿಂದ ಇವರ ಆಡಳಿತದ ಬಗ್ಗೆ ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ಅನೇಕ ವರ್ಷಗಳಿಂದ ಕೆಲವು ಸ್ಥಳಗಳಿಗೆ ಸೀಮಿತವಾಗದೆ ಕೆಂಪೇಗೌಡರ ಜಯಂತಿಯು ಇಂದು ಇಡೀ ರಾಜ್ಯದಲ್ಲಿ ನಡೆಸುತ್ತಿರುವದು ಶ್ಲಾಘನೀಯ ಎಂದರು.

ಧರ್ಮಾತೀತವಾಗಿ ನಾಡನ್ನು ಕಟ್ಟುವಂತಹ ಕೆಲಸ ಮಾಡಿದವರ ಜಯಂತಿಗಳನ್ನು ಮಾಡುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ನಾವು ಮಾಡುವಂತಹ ಕೆಲಸವು ಭಗವಂತನು ಮೆಚ್ಚುವಂತಿರಬೇಕು. ಆಗ ಮಾತ್ರ ನಮ್ಮ ಕೆಲಸಕ್ಕೆ ಸಂತೃಪ್ತಿ ಸಿಗುತ್ತದೆ. ಜಾತಿ ಧರ್ಮಗಳ ನಡುವೆ ಸಂಕುಚಿತ ಮನೋಭಾವಗಳನ್ನು ದೂರ ಮಾಡಬೇಕು. ಎಲ್ಲಾ ಜಯಂತಿಗಳನ್ನು ಎಲ್ಲರೂ ಒಟ್ಟಾಗಿ ಮಾಡುವಂತಾಗಬೇಕು ಎಂದು ಪ್ರವಚನ ನೀಡಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಆಡಳಿತ ನಡೆಸಿದರು. ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿದ ಮಹಾನ್ ಆಡಳಿತಗಾರರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕೆಂಪೇಗೌಡರು ದೇಶದ ಹೆಸರನ್ನು ವಿಶ್ವ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ. ಇವರಿಂದಾಗಿ ಬೆಂಗಳೂರು ನಗರವು ವಿಶ್ವ ಮಟ್ಟದಲ್ಲಿ ಹೆಸರನ್ನು ಗಳಿಸಿದೆ ಎಂದು ನುಡಿದರು.

ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೆಂಪೇಗೌಡರ ದೂರದೃಷ್ಟಿಯಿಂದ ಸಾಕಷ್ಟು ಸುಧಾರಣೆಗಳು ಕಾಣಸಿಗುತ್ತವೆ. ಕೆಂಪೇಗೌಡರ ವ್ಯಕ್ತಿತ್ವವು ಇತರರಿಗೆ ಆದರ್ಶಪ್ರಾಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಅವರು ಇಂದಿನ ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿ ಯುವಜನರಿಗೆ ಕೆಂಪೇಗೌಡರಂತಹ ವ್ಯಕ್ತಿತ್ವವು ಅವರ ಜೀವನಕ್ಕೆ ಸ್ಪೂರ್ತಿ ನೀಡುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ರಾಘವೇಂದ್ರ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಇಂಪು ನೀಡಿತು. ಒಕ್ಕಲಿಗ ಸಮಾಜದ ಮುಖಂಡರಿಗೆ ಸನ್ಮಾನ ಮಾಡಲಾಯಿತು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷÀ ಎಸ್.ಎಂ.ಚಂಗಪ್ಪ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷÀ ಸೂರ್ತಲೆ ಸೋಮಣ್ಣ, ಜಿ.ಪಂ. ಸದಸ್ಯೆ ಚಂದ್ರಕಲಾ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಸಿ. ಶಂಕರ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ ವಂದಿಸಿದರು.