ಸಿದ್ದಾಪುರ, ಆ 31: ಹಾಡ ಹಗಲೇ ಕಾಡಾನೆಗಳ ಹಿಂಡೊಂದು ಕಾಫಿ ತೋಟದೊಳಗೆ ನುಸುಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಅಟ್ಟಿಸಿದ ಘಟನೆ ಸಿದ್ದಾಪುರ ಸಮೀಪದ ಬೀಟಿಕಾಡು ತೋಟದಲ್ಲಿ ಇಂದು ನಡೆದಿದೆ. ಬೀಟಿಕಾಡು ತೋಟದಲ್ಲಿ ಕಾರ್ಮಿಕರು ಕೆಲಸ ಮಾಡಿಕೊಂಡಿದ್ದ ಸಂದರ್ಭ ದಿಢೀರನೆ 8 ಮರಿ ಆನೆಗಳು ಸೇರಿದಂತೆ ಸುಮಾರು 30 ಕಾಡಾನೆಗಳು ಏಕ ಕಾಲಕ್ಕೆ ಕಾಫಿ ತೋಟಕ್ಕೆ ನುಸುಳಿತು ಎನ್ನಲಾಗಿದೆ. ತೋಟ ಕೆಲಸದಲ್ಲಿ ಮಗ್ನರಾಗಿದ್ದ ಕಾರ್ಮಿಕರು ಕಾಡಾನೆಗಳ ಬರುವಿಕೆಯನ್ನು ಕಂಡು ಬೆದರಿ ದಿಕ್ಕಾ ಪಾಲಾಗಿ ಎದ್ದುಬಿದ್ದು ಓಡಿದ್ದಾರೆ. ಓಡುವ ಸಂದರ್ಭದಲ್ಲಿ ಕೆಲ ಕಾರ್ಮಿಕರಿಗೆ ಗಾಯಗಳಾಗಿವೆ. ನಂತರ ಮಧ್ಯಾಹ್ನ 2 ಗಂಟೆಯ ಬಳಿಕ ಮತ್ತೊಮ್ಮೆ ಕಾಡಾನೆಗಳ ಹಿಂಡು ತೋಟದೊಳಗೆ ನುಗ್ಗಿ ದಾಂಧಲೆ ನಡೆಸಿವೆ. ಕಾರ್ಮಿಕರನ್ನು ಕೆಲಸ ಮಾಡಲು ಬಿಡದೆ ಅಟ್ಟಿಸಿವೆ. ಇದರಿಂದಾಗಿ ಭಯಗೊಂಡ ಕಾರ್ಮಿಕರು ಮತ್ತೊಮ್ಮೆ ತಾವು ಕೆಲಸ ಮಾಡುತ್ತಿದ್ದ ಪರಿಕರಗಳನ್ನು ಸ್ಥಳದಲ್ಲೇ ಬಿಟ್ಟು ಓಡಿದ್ದು,

(ಮೊದಲ ಪುಟದಿಂದ) ತದನಂತರ ಕಾಡಾನೆಗಳು ರಸ್ತೆಯ ಮೂಲಕ ಹಿಂಡುಹಿಂಡಾಗಿ ಮತ್ತೊಂದು ತೋಟಕ್ಕೆ ಹಾದು ಹೋಗಿದ್ದು, ಪಾಲಿಬೆಟ್ಟ ರಸ್ತೆಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಬೀಟಿಕಾಡು ಭಾಗದಲ್ಲಿ ಉಪವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದಲ್ಲಿ ಆರ್.ಆರ್.ಟಿ ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಾಡಾನೆಗಳ ಚಲನವಲನಗಳನ್ನು ಗಮನಿಸಿ, ತೋಟದ ಲೈನ್‍ಮನೆ ಹಾಗೂ ಜನವಸತಿ ಪ್ರದೇಶಕ್ಕೆ ಕಾಡಾನೆಗಳು ತೆರಳದಂತೆ ಎಚ್ಚರಿಕೆ ವಹಿಸಿದೆ.

ಬೀಟಿಕಾಡು ಭಾಗದಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕಾಡಾನೆಗಳು ಬೀಡುಬಿಟ್ಟು ಉಪಟಳ ನೀಡುತ್ತಿದ್ದು, ಕಾಡಾನೆ ಧಾಳಿಗೆ ಹಲವರು ಸಾವನ್ನಪ್ಪಿದ್ದಾರೆ. ತೋಟದಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ವಾಗಿದ್ದು, ಕಾಡಾನೆಗಳನ್ನು ಅರಣ್ಯ ಇಲಾಖೆಯು ಕೂಡಲೇ ಕಾಡಿಗೆ ಅಟ್ಟಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಕಾರ್ಮಿಕರನ್ನು ಒಗ್ಗೂಡಿಸಿ ಅರಣ್ಯ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು. -ವರದಿ: ಎ.ಎನ್ ವಾಸು