ಮಡಿಕೇರಿ, ಆ. 31: ಪಾಕಿಸ್ತಾನದೊಂದಿಗಿನ ಹೋರಾಟದಲ್ಲಿ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸ್ಮರಣೆ ಹಾಗೂ ಅವರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೆ. 7 ರಂದು ನಗರದಲ್ಲಿ ಜರುಗಲಿದೆ.

1965ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಕೊಡಗಿನ ಯೋಧ ಅಜ್ಜಮಾಡ ಬೋಪಯ್ಯ ದೇವಯ್ಯ ಭಾಗವಹಿಸಿದ್ದರು. ದೇವಯ್ಯ ಪಾಕಿಸ್ತಾನದ ಮೇಲೆ ಬಾಂಬ್ ಧಾಳಿ ನಡೆಸಿ ಹಿಂತಿರುಗುತ್ತಿದ್ದ ಸಂದರ್ಭ ಪಾಕಿಸ್ತಾನದ ಯುದ್ಧ ವಿಮಾನ ಹಿಂಬಾಲಿಸಿ ಬರುತ್ತಿತ್ತು. ಭಾರತದ ಉಳಿದ ವಿಮಾನಗಳ ರಕ್ಷಣೆಗಾಗಿ ದೇವಯ್ಯ ಈ ವಿಮಾನದೊಂದಿಗೆ ಕಾದಾಟಕ್ಕೆ ನಿಂತರು. ತಮ್ಮ ದುರ್ಬಲ ವಿಮಾನದಲ್ಲಿ ಕೆಚ್ಚೆದೆಯಿಂದ ಹೋರಾಡಿ ಶತ್ರುವಿನ ಶಕ್ತಿಶಾಲಿ ವಿಮಾನವನ್ನು ಹೊಡೆದುರುಳಿಸಿ ತಾವು ಕೂಡ ಹುತಾತ್ಮರಾದರು. ಸೆಪ್ಟಂಬರ್ 7 ರಂದು ಈ ಘಟನೆ ನಡೆದಿದ್ದು, ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸ್ಮರಣೆ ಕಾರ್ಯಕ್ರಮವನ್ನು ನಡೆಸುತ್ತಿದೆ.

ಬೆಳಿಗ್ಗೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಗೌರವ ಸಲ್ಲಿಸಿ ನಂತರ ಕೊಡವ ಸಮಾಜದಲ್ಲಿ ಕಾರ್ಯಕ್ರಮ ನಡೆಸಲಾಗುವದು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶ ಸೇವೆ ಸಂದರ್ಭ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕುರಿತು ಯುವ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ``1965ರ ಯುದ್ಧ ಹಾಗೂ ಕೊಡಗಿನ ಮಹಾವೀರ’’ ಎಂಬ ಕೃತಿಯನ್ನು ರಚಿಸಿದ್ದು, ಇದೇ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವದು. ಕೃತಿ ಬಿಡುಗಡೆಯೊಂದಿಗೆ ದೇವಯ್ಯ ಅವರ ಜೀವನದÀ ಪ್ರಮುಖ ಘಟನೆಗಳು ಹಾಗೂ ಯುದ್ಧದ ಕುರಿತು ಮಾಹಿತಿಯ ಪಿಪಿಟಿ ಹಾಗೂ ವೀಡಿಯೋ ಪ್ರದರ್ಶನ ನಡೆಯಲಿದೆ ಎಂದು ಅಯ್ಯಪ್ಪ ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸ್ಮರಣೆ ನಂತರ, ಕೊಡವ ಸಮಾಜದ ತನಕ ಮೆರವಣಿಗೆ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಮಾಜಿ ಸಚಿವ ಎಂ.ಸಿ. ನಾಣಯ್ಯ, ಕೊಡವ ಸಮಾಜ ಉಪಾಧ್ಯಕ್ಷ ಮಣವಟ್ಟಿರ ಇ. ಚಿಣ್ಣಪ್ಪ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಎಸ್ಪಿ ರಾಜೇಂದ್ರ ಪ್ರಸಾದ್, ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಜ್ಜಮಾಡ ಕುಟುಂಬದ ಅಧ್ಯಕ್ಷ ಗಣೇಶ್, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಪದಾಧಿಕಾರಿಗಳು, ನಿವೃತ್ತ ಯೋಧರು, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನಹಾಗೂ ದೇವಯ್ಯ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.