ಮಡಿಕೇರಿ, ಸೆ. 2: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಆಚರಿಸಲ್ಪಡುವ ಕೃಷಿಗೆ ಪೂರಕವಾದ ಹಬ್ಬಗಳಲ್ಲಿ ಒಂದಾದ ಕೈಲ್‍ಪೊಳ್ದ್‍ನ ಸಂಭ್ರಮ ತಾ. 3ರಂದು (ಇಂದು) ಜಿಲ್ಲೆಯಾದ್ಯಂತ ನಡೆಯಲಿದೆ. ಕೊಡಗಿನ ಆಯುಧಪೂಜೆ ಎಂದು ಹೇಳಲ್ಪಡುವ ಈ ಹಬ್ಬಾಚರಣೆ ವಿಶೇಷವಾದದ್ದು. ಕೃಷಿ ಪರಿಕರಗಳು, ಕೋವಿ, ಕತ್ತಿಯಂತಹ ಆಯುಧಗಳ ಪೂಜೆಯೊಂದಿಗೆ ಜನ- ಜಾನುವಾರುಗಳನ್ನು ಪೂಜಿಸುವದು ಇದರ ವಿಶೇಷತೆ. ಇದರೊಂದಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು ಸೇರಿದಂತೆ ವಿವಿಧ ಕ್ರೀಡಾಕೂಟಗಳು ಗ್ರಾಮ ಗ್ರಾಮಗಳಲ್ಲಿ ನಡೆಯಲಿದೆ.ಸಾಂಪ್ರದಾಯಿಕವಾದ ಆಚರಣೆ ಯೊಂದಿಗೆ ಕಡ್‍ಂಬುಟ್ಟ್- ಪಂದಿಕರಿ ಸೇರಿದಂತೆ ಕೊಡಗಿನ ವಿವಿಧ ಭಕ್ಷ್ಯ- ಭೋಜನಗಳ ಸವಿಯೂ ಹಬ್ಬದ ವಿಶೇಷತೆ. ಕೈಲ್‍ಪೊಳ್ದ್ ಹಬ್ಬ ಎಂದರೆ ಕೇವಲ ತಿನ್ನುವದು, ಕುಡಿಯುವದಕ್ಕೆ ಮಾತ್ರ ಎಂಬ ಅಭಿಪ್ರಾಯ ತಪ್ಪಾಗುತ್ತದೆ. ಇದರ ಸಾಂಪ್ರದಾಯಿಕ ಆಚರಣೆಯ ಮಹತ್ವವನ್ನು ಅರಿತು ಕೊಳ್ಳಬೇಕು ಎಂಬದು ಹಿರಿಯರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿ ಈ ಹಬ್ಬದ ಆಚರಣೆ ಸೆ. 3ರಂದು

(ಮೊದಲ ಪುಟದಿಂದ) ಸಾರ್ವತ್ರಿಕವಾಗಿ ಆಚರಿಸಲ್ಪಡುತ್ತಿದೆಯಾದರೂ ಈ ಹಿಂದಿನ ಪದ್ಧತಿಯಂತೆ ವಿವಿಧೆಡೆಗಳಲ್ಲಿ ಈಗಾಗಲೇ ಹಬ್ಬಾಚರಣೆ ಮುಕ್ತಾಯಗೊಂಡಿದೆ. ಇಲ್ಲಿನ ಮೂಲನಿವಾಸಿಗಳು ಹಿಂದಿನ ಕಾಲದಲ್ಲಿ ರಾಜರ ಆಡಳಿತದಲ್ಲಿ ಸೈನಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದೇ ದಿನ ಹಬ್ಬ ಆಚರಣೆಯಾದರೆ ರಕ್ಷಣೆ ಕಷ್ಟ ಎಂಬ ಕಾರಣದಿಂದ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ದಿನ ಹಬ್ಬ ಆಚರಣೆ ನಿಗದಿಯಾಗಿದೆ ಎಂಬ ಅಭಿಪ್ರಾಯ ಒಂದೆಡೆಯಿದ್ದರೆ, ಪರಸ್ಪರ ಬಂಧುಮಿತ್ರರು ಬೇರೆ ಬೇರೆ ಊರಿನಲ್ಲಿ ಇರುವದರಿಂದ ಎಲ್ಲರೂ ಬೆರೆತು ಒಂದಾಗಿ ಹಬ್ಬದ ಸಂಭ್ರಮಾಚರಣೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರತ್ಯೇಕ ದಿನಗಳಲ್ಲಿ ಹಬ್ಬ ಆಚರಣೆ ನಿಗದಿ ಮಾಡಲಾಗಿದೆ ಎಂದೂ ಕೆಲವು ಹಿರಿಯರು ಹೇಳುತ್ತಾರೆ.

ಜಿಲ್ಲೆಯಲ್ಲಿ ಪ್ರಥಮವಾಗಿ ಚಿಂಙÁ್ಯರ್ 1ರಂದು ಹಬ್ಬ ಆಚರಿಸಲ್ಪಡುತ್ತದೆ. ಈ ಹಬ್ಬ ನಿಗದಿಯಾಗುವದು ಕಕ್ಕಡ ಮಾಸ ಕಳೆದ ಬಳಿಕ ಬರುವ ಪ್ರಥಮ ಮಂಗಳವಾರದಂದು. (ಸಂಕ್ರಮಣ ಕಳೆದು) ಇದು ಆಚರಿಸಲ್ಪಡುವದು. ಸೂರ್ಲಬ್ಬಿ, ಮಂಕ್ಯ, ಕಿಕ್ಕರಳ್ಳಿ, ಹಮ್ಮಿಯಾಲ ಮತ್ತಿತರ ಗ್ರಾಮಗಳನ್ನು ಒಳಗೊಂಡ ಸೂರ್ಲಬ್ಬಿನಾಡ್‍ನಲ್ಲಿ ಈ ಬಾರಿ ಆಗಸ್ಟ್ 22ರಂದು ಹಬ್ಬಾಚರಣೆ ನಡೆದಿದೆ.

ಇದಾದ ಬಳಿಕ ಪೊರಮಲೆನಾಡ್ (ಗಾಳಿಬೀಡು ವ್ಯಾಪ್ತಿ)ಯಲ್ಲಿ ಇದಾದ ಬಳಿಕ ಮುತ್ತ್‍ನಾಡ್ (ಕಾಲೂರು ವಿಭಾಗ) ನಂತರ ನಾಲ್‍ನಾಡ್ (ನಾಪೋಕ್ಲು) ವಿಭಾಗದಲ್ಲಿ ಹಬ್ಬ ಆಚರಿಸಲ್ಪಡುತ್ತಿದ್ದು, ಈ ಪ್ರದೇಶದಲ್ಲಿ ಈಗಾಗಲೇ ಕೈಲ್‍ಪೊಳ್ದ್ ಆಚರಣೆ ಮುಗಿದಿದೆ. ಇತರ ಭಾಗಗಳಲ್ಲಿ ತಾ.3ರಂದು (ಇಂದು) ಸಂಭ್ರಮಾಚರಣೆ ನಡೆಯಲಿದ್ದು, ಜಿಲ್ಲೆಗೆ ಸೀಮಿತವಾಗಿ ಸರಕಾರಿ ರಜೆಯೂ ಈ ದಿನದಂದೇ ನೀಡಲ್ಪಡುತ್ತದೆ. ಮುನ್ನಾ ದಿನವಾದ ತಾ. 2ರಂದು ಹಬ್ಬಕ್ಕೆ ಜನರು ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಸಿದ್ಧತೆಯಲ್ಲಿ ತೊಡಗಿದ್ದುದು ಕಂಡುಬಂದಿತು.

ಜಿಲ್ಲೆಯ ವಿವಿಧೆಡೆ ತಾ. 3ರಂದು (ಇಂದು) ತೆಂಗಿನಕಾಯಿಗೆ ಗುಂಡು ಹೊಡೆಯುವದು ಸೇರಿದಂತೆ ವಿವಿಧ ಕ್ರೀಡಾಕೂಟಗಳೂ ನಿಗದಿಯಾಗಿವೆ.

ಮೂರ್ನಾಡು : ಮೂರ್ನಾಡು ಸ್ಪೋಟ್ರ್ಸ್ ಕ್ಲಬ್ ವತಿಯಿಂದ 93ನೇ ವಾರ್ಷಿಕ ಕೈಲ್ ಮುಹೂರ್ತ ಹಬ್ಬದ ಆಟೋಟ ಸ್ಪರ್ಧೆ ತಾ. 3ರಂದು (ಇಂದು) ನಡೆಯಲಿದೆ.

ಇಲ್ಲಿನ ನಾಡ್‍ಮಂದ್ ಹಾಗೂ ಶಾಲಾ ಮೈದಾನದಲ್ಲಿ ಮಧ್ಯಾಹ್ನ 1.30 ಗಂಟೆಗೆ ಆಟೋಟ ಸ್ಪರ್ಧೆಯು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟನೆ ನಡೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ, ಪ್ರಾಥಮಿಕ ಶಾಲೆ, ಪುರುಷರಿಗೆ, ಮಹಿಳೆಯರಿಗೆ, ಕಿರಿಯರಿಗೆ ವಿವಿಧ ಬಗೆಯ ಓಟದ ಸ್ಪರ್ಧೆ, ಕಾಲು ಕಟ್ಟಿ ಓಟ, ಭಾರದ ಗುಂಡು ಎಸೆತ, ಸಂಗೀತ ಕುರ್ಚಿ, ಸೈಕಲ್ ರೇಸು, ನಿಂಬೆ ಹಣ್ಣ್ಣು ಚಮಚ ಓಟ, ವಾದ್ಯದ ಕುಣಿತ, ವಯಸ್ಕರ ಓಟ, ಹಾಗೂ ಆರು ಗ್ರಾಮದ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ.

ಸಂಜೆ 4.30 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಮೂರ್ನಾಡು ಸಹಕಾರ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಪಳಂಗಂಡ ಕೆ. ಅಪ್ಪಣ್ಣ ವಹಿಸಲಿದ್ದಾರೆ.

-ಶಶಿಸೋಮಯ್ಯ,