*ಗೋಣಿಕೊಪ್ಪಲು, ಸೆ. 2: ಯುವ ಸಮುದಾಯದ ಒಗ್ಗಟ್ಟಿನಿಂದ ದೇಶ, ರಾಜ್ಯದ ಬದಲಾವಣೆ ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಗೆ ಬಿ.ಜೆ.ಪಿ. ಸರಕಾರವನ್ನು ತರುವದು ಪ್ರತಿಯೊಬ್ಬ ಬಿ.ಜೆ.ಪಿ. ಕಾರ್ಯಕರ್ತನ ಕರ್ತವ್ಯ ವಾಗಿದೆ ಎಂದು ರಾಜ್ಯ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ತಾಲೂಕು ಯುವ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮಂಗಳೂರಿನಲ್ಲಿ ನಡೆಯುವ ಬೃಹತ್ ಬೈಕ್ ಜಾಥಾಕ್ಕೆ ವೀರಾಜಪೇಟೆ ತಾಲೂಕಿನ 183 ಬೂತ್‍ನ ಕಾರ್ಯಕರ್ತರು ಭಾಗವಹಿಸಬೇಕು. ಭಾಗವಹಿಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳುವಂತೆ ಸಲಹೆ ನೀಡಿ, ಕರಾವಳಿ ಭಾಗದ ಆಡಳಿತ ಕೆಟ್ಟ ರೀತಿಯಿಂದ ಕೂಡಿದೆ.

ಗೋವು ಕಳವು ವಿಚಾರದಲ್ಲಿ ಮೊಕದ್ದಮೆ ದಾಖಲಾಗುತ್ತಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಭಯದ ವಾತಾವರಣ ಉಂಟು ಮಾಡಿದೆ. ಕೇರಳ ರಾಜ್ಯದ ಮುಖ್ಯಮಂತ್ರಿ ಮಂಗಳೂರು ವ್ಯಾಪ್ತಿಯಲ್ಲಿ ಸಭೆ ನಡೆಸಲು ಮುಂದಾಗಿರುವದು ಆತಂಕ ಮೂಡಿಸಿರುವಂತಹದ್ದು. ಇದರಿಂದಾಗಿ ಇಲ್ಲಿಗೆ ಬೈಕ್ ಜಾಥಾ ಮೂಲಕ ತೆರಳಲು ಬೂತ್ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ಬಗ್ಗೆ ಮೋದಿಯವರು ಇಟ್ಟ ನಂಬಿಕೆ ಮತ್ತು ಕನಸು ನೆರವೇರಿಸುವದು ಯುವ ಸಮು ದಾಯದ ಕರ್ತವ್ಯ.

ಸಿದ್ದರಾಮಯ್ಯರ ಸರಕಾರದಿಂದ ಜನ ನಿರಾಶೆಗೊಳಗಾಗಿದ್ದಾರೆ. ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮುಂದಿನ ಚುನಾವಣೆಯನ್ನು ಗೆಲ್ಲಬೇಕಾಗಿದೆ ಎಂದರು.

ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಕಾಂಗ್ರೆಸ್ ಸರಕಾರದ ಆಡಳಿತ ಜನರಿಗೆ ಮನವರಿಕೆಯಾಗಿದೆ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸೌಜನ್ಯತೆಯನ್ನು ತೋರದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ರಾಜ್ಯದ ಅಭಿವೃದ್ಧಿಯ ಚಿಂತನೆಯನ್ನು ಕೈಬಿಟ್ಟಿದೆ. ಅಧಿಕಾರದ ದಾಹವಷ್ಟೇ ಇವರಲ್ಲಡಗಿರುವ ಶಕ್ತಿ ಎಂದು ಆರೋಪಿಸಿದರು.

ಈ ಸಂದರ್ಭ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಪ್ರಧಾನ ಕಾರ್ಯದರ್ಶಿ ಗಪ್ಪಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ತೋರೇರ ವಿನು, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅದ್ಯಕ್ಷ ಸುವಿನ್ ಗಣಪತಿ, ಸದಸ್ಯ ಕಿಲನ್ ಗಣಪತಿ ಉಪಸ್ಥಿತರಿದ್ದರು.