ಮಡಿಕೇರಿ, ಸೆ. 2: ತ್ಯಾಗ ಬಲಿದಾನಗಳ ಹಬ್ಬವಾದ ‘ಈದುಲ್ ಅಝ್ ಹಾ’ ಪ್ರಯುಕ್ತ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್‍ನ ಮಸೀದಿಯಲ್ಲಿ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನೆರವೇರಿತು. ಧರ್ಮಗುರುಗಳಾದ ಹಾಫಿಝ್ ರಫೀಕ್ ಉಜ್ಜಮಾ ಧಾರ್ಮಿಕ ಪ್ರವಚನ ನೀಡಿದರು.

ಈದುಲ್ ಹಬ್ಬವು ಪ್ರವಾದಿ ಇಬ್ರಾಹಿಮ್(ಅ) ಹಾಗೂ ಅವರ ಪುತ್ರ ಇಸ್ಮಾಯಿಲ್(ಅ) ಅವರ ತ್ಯಾಗ, ಬಲಿದಾನಗಳ ಪ್ರತೀಕವಾಗಿದೆ. ಈ ಹಬ್ಬವನ್ನು ಬಕ್ರೀದ್ ಎಂದು ಕರೆಯಲಾಗುತ್ತಿದ್ದು ಇದು ಹಬ್ಬದ ಆಚರಣೆಗೆ ಸಂಕುಚಿತ ಅರ್ಥವನ್ನು ಕಲ್ಪಿಸಿದೆ. ಆದ್ದರಿಂದ ಬಕ್ರೀದ್ ಎಂಬ ಹೆಸರನ್ನು ಕೈಬಿಡಬೇಕೆಂದು ಹೇಳಿದರು. ಪವಿತ್ರ ಖುರ್‍ಆನ್ ಗೆ ವಿರುದ್ಧವಾದ ಯಾವದೇ ಆಚಾರಗಳಿಗೆ ಇಸ್ಲಾಮ್ ಧರ್ಮದಲ್ಲಿ ಸ್ಥಾನವಿಲ್ಲ. ಮೂಢನಂಬಿಕೆ, ಅಂಧಾನುಕರಣೆ ಗಳನ್ನು ಪವಿತ್ರ ಖುರ್‍ಆನ್ ಬಲವಾಗಿ ವಿರೋಧಿಸಿದೆ. ಖುರ್‍ಆನ್‍ನ ವಿಚಾರಧಾರೆಗಳು ವೈಜ್ಞಾನಿಕವಾಗಿದ್ದು, ಧರ್ಮದ ತಳಹದಿಯೊಂದಿಗೆ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಇಸ್ಲಾಮ್ ಧರ್ಮ ಪ್ರತಿಪಾದಿಸುತ್ತದೆ ಎಂದರು.

ಜಮಾಅತ್ ಅಧ್ಯಕ್ಷ ಎಂ.ಬಿ. ಝಹೀರ್ ಅಹ್ಮದ್ ಮಾತನಾಡಿದರು. ಪ್ರಾರ್ಥನೆಯ ನಂತರ ಮುಸ್ಲಿಮ್ ಬಾಂಧವರು ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯಗಳನ್ನು ಕೋರಿದರು. ಮಹಿಳೆಯರು, ಮಕ್ಕಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ವೀರಾಜಪೇಟೆ

ಚಾಂದ್ರಮಾನ ಮಾಸದ ದುಲ್‍ಹಜ್ 10ರ ಈದುಲ್ ಅಝ್‍ಹಾ (ಬಕ್ರೀದ್)ಹಬ್ಬವನ್ನು ಮುಸಲ್ಮಾನ್ ಬಾಂಧವರು ಭಕ್ತಿ ಮತ್ತು ಶ್ರದ್ದೆಯಿಂದ ಆಚರಿಸಿದರು. ನಗರದ ಮಸೀದಿ ಮತ್ತು ಈದ್‍ಗಾಹ್‍ಗಳಲ್ಲಿ ಆಯಾ ಧರ್ಮ ಗುರುಗಳು ಸಮುದಾಯ ಬಾಂಧವರನ್ನುದ್ದೇಶಿಸಿ ಈದ್‍ಸಂದೇಶ ನೀಡಿ ವಿಶೇಷ ಈದ್ ನಮಾಝ್‍ಗೆ ನೇತೃತ್ವ ನೀಡಿದರು. ಸೃಷ್ಟಿಕರ್ತನು ನೀಡಿರುವ ಅನುಗ್ರಹ ಹಾಗೂ ಅನುಕಂಪಗಳನ್ನು ಸಹಜೀವಿ ಗಳೊಂದಿಗೆ ಹಂಚುವವನೇ ನೈಜ ವಿಶ್ವಾಸಿಯಾಗುತ್ತಾನೆಂದು ಪ್ರವಚನ ನೀಡಿದವರು ಸಂದೇಶವಿತ್ತರು.

ಗೋಣಿಕೊಪ್ಪ ರಸ್ತೆಯ ಬಂಗಾಳೀ ಬೀದಿಯಲ್ಲಿರುವ ಮಸ್ಜಿದ್-ಎ-ಅಝಂನಲ್ಲಿ ಮೌ||.ಸಿರಾಜುದ್ದೀನ್ , ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಮೌ||.ಗುಲ್‍ಷದ್, ಸುಣ್ಣದ ಬೀದಿಯಲ್ಲಿರುವ ಮದೀನಾ ಮಸೀದಿಯಲ್ಲಿ ಮೌ||. ಮುಝಮ್ಮಿಲ್, ನಮಾಝ್ ಮತ್ತು ಈದ್ ಪ್ರವಚನಕ್ಕೆ ನಾಯಕತ್ವ ನೀಡಿದರು. ಸಾಮೂಹಿಕ ನಮಾಝ್ ನಂತರ ಸಮುದಾಯ ಬಾಂಧವರು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಖಬರ ಸ್ಥಾನಕ್ಕೆ ತೆರಳಿ ಅಗಲಿದ ಹಿರಿಯರಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಉತ್ತರ ಭಾರತದ ಮುಸ್ಲಿಂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಮಾಝ್‍ನಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ನಗರದ ಶಾಫಿ ಮುಸಲ್ಮಾನರು ನಿನ್ನೆ ಬಕ್ರೀದ್ ಹಬ್ಬವನ್ನು ಆಚರಿಸಿದ್ದರು.

ಕುಶಾಲನಗರ

ಬಕ್ರಿದ್ ಹಬ್ಬವನ್ನು ಶನಿವಾರ ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಸ್ಥಳೀಯ ಜಾಮಿಯಾ ಮಸೀದಿಯಲ್ಲಿ ಸುನ್ನಿ ಸಮುದಾಯ ಬಾಂಧವರು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ವ್ಯಾಪ್ತಿಯ ಮಸೀದಿಗಳಲ್ಲಿ ಬಕ್ರಿದ್ ಅಂಗವಾಗಿ ವಿಶೇಷ ಪ್ರಾರ್ಥನೆ, ಧರ್ಮಗುರುಗಳಿಂದ ಧಾರ್ಮಿಕ ಪ್ರವಚನಗಳು ನಡೆಯಿತು. ಮುಸಲ್ಮಾನ ಬಾಂಧವರು ಪರಸ್ಪರ ಹಬ್ಬದ ಶುಭಾಶÀಯ ವಿನಿಮಯ ಮಾಡಿಕೊಂಡರು. ಹಿಲಾಲ್ ಮಸೀದಿಯಲ್ಲಿ ಶುಕ್ರವಾರ ಬಕ್ರಿದ್ ಹಬ್ಬ ಆಚರಣೆ ನಡೆಯಿತು.

ಸೋಮವಾರಪೇಟೆ

ಇಲ್ಲಿನ ಹನಫಿ ಜಾಮಿಯಾ ಮಸೀದಿಯಲ್ಲಿ ಹನಫಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ದಿನದ ಅಂಗವಾಗಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು. ಹನಫಿ ಜಾಮಿಯಾ ಮಸೀದಿ ಅಧ್ಯಕ್ಷ ಮುಕ್ರಂ ಬೇಗ್ ಬಾಬು ಸೇರಿದಂತೆ ನೂರಾರು ಮಂದಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಇಂದು ಜಿಲ್ಲೆಯಾದ್ಯಂತ 17 ಕಡೆಗಳಲ್ಲಿ ಬಕ್ರೀದ್ ಆಚರಣೆಯೊಂದಿಗೆ ಧಾರ್ಮಿಕ ಸಭೆಗಳನ್ನು ನಡೆಸಲಾಯಿತು ಎಂದು ತಿಳಿದು ಬಂದಿದೆ.