ವೀರಾಜಪೇಟೆ, ಸೆ. 2: ಇಲ್ಲಿನ ಮೀನುಪೇಟೆಯ ಚೈತನ್ಯ ಮಠಪುರದ ಮುತ್ತಪ್ಪ ಕಲಾ ಮಂಟಪದಲ್ಲಿ ತಾ. 10 ರಂದು9ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲು ಪೂರ್ವ ಸಿದ್ಧತೆ ನಡೆದಿದೆ ಎಂದು ಓಣಂ ಹಬ್ಬದ ಆಚರಣಾ ಸಮಿತಿ ಅಧ್ಯಕ್ಷ ಇ.ಸಿ. ಜೀವನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೀವನ್, ಪ್ರತಿ ವರ್ಷದಂತೆ ಈ ವರ್ಷವು ಓಣಂ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ತಾ. 10 ರಂದು ಪೂರ್ವಹ್ನ 8.30 ಗಂಟೆಗೆ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದಲ್ಲಿ ಓಣಂ ಉತ್ಸವ ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ 9 ಗಂಟೆಗೆ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆ, 9.30 ಗಂಟೆಗೆ ಮುತ್ತಪ್ಪ ಕಲಾ ಮಂಟಪದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಕಾವಡಿಯಾಟಂ, ಅಮ್ಮಕೊಡಂ, ಮಯೂರ ನೃತ್ಯ, ಮಹಾಬಲಿಯ ಮೆರವಣಿಗೆ, 12 ಗಂಟೆಗೆ ಓಣಂ ಸದ್ಯ ನಡೆಯಲಿದೆ ಎಂದರು.

ಸಮಿತಿಯ ಕಾರ್ಯದರ್ಶಿ ಸಿ.ಆರ್. ಬಾಬು ಮಾತನಾಡಿ, ಅಪರಾಹ್ನ 1.30 ಗಂಟೆಗೆ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಶಾಜಿ ಅಚ್ಚುತ್ತನ್, ಮಡಿಕೇರಿ ನಗರ ಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯನ್, ಭಾ.ಜ.ಪ. ಜಿಲ್ಲಾ ಅಧ್ಯಕ್ಷ ಭಾರತೀಶ್ ಉಪಸ್ಥಿತರಿರುವರು. 3 ಗಂಟೆಗೆ ಕೇರಳದ ಸುಪ್ರಸಿದ್ಧ ತಂಡದವರೊಂದಿಗೆ ದೃಶ್ಯಾವಿಷ್ಕಾರದೊಂದಿಗೆ ನಾಡನ್ ಪಾಟ್ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಕೋಶಾಧಿಕಾರಿ ಸಿ.ಆರ್. ಸಜೀವನ್ ಮಾತನಾಡಿ, ಅದೇ ದಿನ ಸಂಜೆ 5.30 ಗಂಟೆಗೆ ಉತ್ಸವದ ಸಮಾರೋಪ ನಡೆಯಲಿದ್ದು, ಇ.ಸಿ. ಜೀವನ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿ ಗಣ್ಯರು ಭಾಗವಹಿಸಲಿರುವರು ಎಂದು ತಿಳಿಸಿದರು.

ಸಹ ಕಾರ್ಯದರ್ಶಿ ಎಂ.ಎಸ್. ಸತೀಶ್ ಮಾತನಾಡಿ, ಪೂಕಳಂ ಸ್ಫರ್ಧೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ 8 ಗಂಟೆ ಒಳಗೆ ಬರುವವರಿಗೆ ಮಾತ್ರ ಅವಕಾಶ, ಒಂದು ತಂಡದಲ್ಲಿ ನಾಲ್ಕು ಸದಸ್ಯರು ಮಾತ್ರ ಭಾಗವಹಿಸುವಿಕೆ, 5x5ಅಡಿ ಚೌಕಟ್ಟಿನೋಳಗೆ ಮಾತ್ರ ರಂಗೋಲಿ ಇರಬೇಕು, ಹೂವುಗಳನ್ನು ಮಾತ್ರ ಉಪಯೋಗಿಸಬೇಕು. ವೀರಾಜಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿರುವ ಹಿಂದೂ ಮಲೆಯಾಳಿಗಳಿಗೆ ಸ್ಫರ್ಧೆ ಸೀಮಿತಗೊಂಡಿದೆ. ಎಂದರು. ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ಹಿಂದೂ ಮಲೆಯಾಳಿ ಮಕ್ಕಳಿಗೆ ಬಹುಮಾನವನ್ನು ನೀಡಲಾಗುವದು ಎಂದು ಹೇಳಿದರು. ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಮೊ. 9731258197 ಅಥವಾ 9448721118 ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಉತ್ಸವ ಸಮಿತಿ ಸದಸ್ಯರಾದ ಟಿ.ಪಿ. ಸಜೀವನ್, ಕೆ.ಎನ್. ಉಪೇಂದ್ರ, ಪಿ. ಜನಾರ್ಧನ್ ಉಪಸ್ಥಿತರಿದ್ದರು.