ಕೂಡಿಗೆ, ಸೆ. 2: ಕುಶಾಲನಗರ ತಾಲೂಕು ಹೋರಾಟ ಸಮಿತಿಯ ಸಭೆಯು ಇತ್ತೀಚೆಗೆ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಕುಶಾಲನಗರದಲ್ಲಿ ನಡೆಯಿತು.

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಹೋಬಳಿ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾನೀಯ ಸಮಿತಿ ರಚನೆ ಹಾಗೂ ಹೋರಾಟದ ಪ್ರಮುಖ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಮತ್ತೊಮ್ಮೆ ಸರಕಾರದ ಗಮನ ಸೆಳೆಯುವ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾದ ಬಗ್ಗೆ ಚರ್ಚೆ ನಡೆಸಲು ಎಲ್ಲಾ ಪಕ್ಷಗಳ ಮುಖಂಡರುಗಳು, ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಹೋರಾಟ ಸಮಿತಿಗಳನ್ನೊಳಗೊಂಡಂತೆ ಕೇಂದ್ರ ಸಮಿತಿಯು ಸಭೆ ನಡೆಸಲು ತೀರ್ಮಾನಿಸಿತು.

ಅದರಂತೆ ಕೂಡಿಗೆಯ ಗಣಪತಿ ಪೆಂಡಾಲ್ ಆವರಣದಲ್ಲಿ ತಾ. 5 ರಂದು 12.30 ಗಂಟೆಗೆ ಸಭೆ ನಡೆಯಲಿದೆ. ಅದೇ ದಿನ ಮುಳ್ಳುಸೋಗೆಯಲ್ಲಿ ಬೆಳಿಗ್ಗೆ 10 ಗಂಟೆಗೆ, 11 ಗಂಟೆಗೆ ಕೂಡುಮಂಗಳೂರು ಗ್ರಾ.ಪಂ. ಆವರಣದಲ್ಲಿ, ಹೆಬ್ಬಾಲೆಯಲ್ಲಿ 3.30ಕ್ಕೆ, ಚಿಕ್ಕಅಳುವಾರದಲ್ಲಿ 4.30 ಗಂಟೆಗೆ ಸಭೆ ನಡೆಸಲಾಗುವದು ಎಂದು ಸಮಿತಿ ತಿಳಿಸಿದೆ.

ಈ ಸಭೆಗೆ ಆಯಾಯ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರುಗಳು, ವಿವಿಧ ರಾಜಕೀಯ ಪಕ್ಷದ ನಾಯಕರು ಪಾಲ್ಗೊಳ್ಳಬೇಕೆಂದು ಕಾವೇರಿ ತಾಲೂಕು ಹೋರಾಟ ಸಮಿತಿ ಕರೆ ನೀಡಿದೆ.