ಮಡಿಕೇರಿ ಸೆ. 2: ಬಡವರು ಸಾಗುವಳಿ ಮಾಡಿರುವ ಭೂಮಿಯನ್ನು ಸಕ್ರಮಗೊಳಿಸದೆ ಭೂ ಮಾಲೀಕರ ಅಕ್ರಮ ಒತ್ತುವರಿಯನ್ನು ಸಕ್ರಮ ಗೊಳಿಸಲು ಸರಕಾರ ಮುಂದಾದಲ್ಲಿ ಭೂ ಸಂಘರ್ಷ ಚಳವಳಿ ಆರಂಭಿಸುವದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್ ಜಿಲ್ಲೆಯಲ್ಲಿರುವ ಸಿ ಮತ್ತು ಡಿ ಭೂಮಿಯನ್ನು ಬಡವರಿಗೆ ಹಂಚಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಭೂ ಹೀನರಿಗೆ ಭೂಮಿ ನೀಡಲು ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಇಲ್ಲ. ಈಗ ಇರುವ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂಬ ಹೇಳಿಕೆ ನೀಡುವದರಲ್ಲಿ ಅಧಿಕಾರಿಗಳು ಸಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆ ಮತ್ತು ರಾಜ್ಯದ ಇತರೆ ಪ್ರಗತಿಪರ ಸಂಘಟನೆಗಳು ಸೇರಿಕೊಂಡು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಚಿಸಿ ಪ್ರತಿಭಟನಾ ಸಮಾವೇಶ ನಡೆಸುವದರ ಮೂಲಕ ಮೇಲೆ ಒತ್ತಡ ಹೇರಿದ ಪರಿಣಾಮ ಜಿಲ್ಲೆಯಲ್ಲಿರುವ 6105 ಎಕರೆ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಯಿಂದ ಹಿಂಪಡೆದು ಭೂ ಹೀನ ಬಡವರಿಗೆ ಹಂಚಲು ರಾಜ್ಯ ಸರಕಾರ ಮುಂದಾಗಿದೆ. ಇದನ್ನು ಕರ್ನಾಟಕ ರೈತ ಸಂಘ ಸ್ವಾಗತಿಸುತ್ತದೆ ಎಂದು ಮಂಜುನಾಥ್ ತಿಳಿಸಿದರು.

ಅರಣ್ಯ ಇಲಾಖೆಯಿಂದ ಹಿಂಪಡೆದಿರುವ ಸಿ ಮತ್ತು ಡಿ ಭೂಮಿಯನ್ನು ಭೂರಹಿತ ಕಡು ಬಡವ ಆದಿವಾಸಿ ಮತ್ತು ಭೂರಹಿತ ದಲಿತರಿಗೆ ನೀಡಬೇಕು, ಉಳ್ಳವರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಘಟಕದ ಉಪಾಧ್ಯಕ್ಷ ಹೆಚ್.ಇ. ಸಣ್ಣಪ್ಪ ಮಾತನಾಡಿ, 2006-07 ರಲ್ಲಿ ಅಂದಿನ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಜಿಲ್ಲೆಯಲ್ಲಿ 36 ಸಾವಿರ ಎಕರೆ ಸಿ ಮತ್ತು ಡಿ ದರ್ಜೆಯ ಭೂಮಿ ಗುರುತಿಸಿ ಭೂ ಹೀನರಿಗೆ ಹಂಚಲು ಯೋಜನೆ ರೂಪಿಸಿದ್ದರು. ಆದರೆ ಸರ್ವೆ ಅಧಿಕಾರಿಗಳ ಕೊರತೆ, ಭೂ ಮಾಲೀಕರು, ಅರಣ್ಯ ಇಲಾಖೆಯ ಹಾಗೂ ಆಳು ವರ್ಗದ ವಿರೋಧದಿಂದ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.

ಬಡವರು, ಆದಿವಾಸಿಗಳು, ದಲಿತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಯಾವದೊ ಇಲಾಖೆಗಳಿಗೆ ನೀಡಲು ಮುಂದಾಗಿರುವದು ಮತ್ತು ಭೂ ಮಾಲೀಕರು ಒತ್ತುವರಿ ಮಾಡಿರುವ ಭೂಮಿಯನ್ನು ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿರುವದನ್ನು ಸಂಘವು ಖಂಡಿಸುತ್ತದೆ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಟಿ. ಆನಂದ್, ಸದಸ್ಯರಾದ ಕೆ.ಎಂ. ದಿನೇಶ್ ಹಾಗೂ ಹೆಚ್.ಡಿ. ಸೋಮಶೇಖರ್ ಉಪಸ್ಥಿತರಿದ್ದರು.