ಮಡಿಕೇರಿ, ಸೆ. 1: ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಕಾಲೇಜಿನಲ್ಲಿ ಯುವಜನತೆ ಎದುರಿಸುವ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಯ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸ್ಪಂದನ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಕೌಶಲ್ಯ ಅವರು ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದ ನಡೆಸುತ್ತಾ , ಮಾನವ ಸಂಬಂಧಗಳು, ಸುರಕ್ಷತೆ, ಸಂವಹನ, ಶಿಕ್ಷಣ, ಮಾರ್ಗದರ್ಶನ, ಬೆಳವಣಿಗೆ, ಆರೋಗ್ಯ ಮತ್ತು ಜೀವನಶೈಲಿ ಯುವ ಸಬಲೀಕರಣ, ಭಾವನೆಗಳ ನಿಯಂತ್ರಣ ಮೊದಲಾದ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು. ಉತ್ತಮ ಜೀವನ ಕೌಶಲ್ಯದ ಬೆಳವಣಿಗೆಯ ಮೂಲಕ ಉತ್ತಮವಾದ ಭವಿಷ್ಯ ಸಾಧ್ಯ ಎಂಬದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು ಮತ್ತೊಬ್ಬ ಆಪ್ತ ಸಮಾಲೋಚಕಿ ಸುಮಿತ್ರಾ ಯುವಸ್ಪಂದನ ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಜನಿಫರ್ ಲೋಲಿಟ ಅವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸರಸ್ವತಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಜವರಪ್ಪ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಕನ್ನಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಕಾವ್ಯಶ್ರೀ ನಿರೂಪಿಸಿ, ಸ್ವಾಗತಿಸಿದರು. ಎನ್.ಎಸ್.ಎಸ್. ನಾಯಕಿ ಅರ್ಪಿತಾ ವಂದಿಸಿದರು.