*ಗೋಣಿಕೊಪ್ಪಲು, ಸೆ. 1: ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಮಂಗಳವಾರ ನಡೆದ ಮೈಸೂರು ವಿಭಾಗಮಟ್ಟದ 14ರಿಂದ 17 ವರ್ಷದೊಳಗಿನ ಬಾಲಕಿಯರ ಫುಟ್‍ಬಾಲ್ ಟೂರ್ನಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿತು.ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಕೊಡಗು ಜಿಲ್ಲೆಯ ತಂಡವನ್ನು 2-0 ಗೋಲುಗಳಿಂದ ಪರಾಭವಗೊಳಿಸಿತು. ಪಂದ್ಯದ ನಿಗದಿತ ಸಮಯದವರೆಗೂ ಉಭಯ ತಂಡಗಳು ಯಾವದೇ ಗೋಲುಗಳಿಸದೆ ಸಮಬಲ ಸಾಧಿಸಿದ್ದವು. ಬಳಿಕ ವಿಜೇತ ತಂಡವನ್ನು ನಿರ್ಧರಿಸಲು ನೀಡಿದ ಪೆನಾಲ್ಟಿ ಸ್ಟ್ರೋಕ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದ ಲಿಷಾ ಹಾಗೂ ಪೂಜಾ ತಲಾ ಒಂದು ಗೋಲುಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಗೋಣಿಕೊಪ್ಪಲು ಲಯನ್ಸ್ ಶಾಲಾ ತಂಡದ ಬಾಲಕಿಯರು ಪರಾಭವಗೊಂಡರು.

ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಕೊಡಗು ಜಿಲ್ಲಾ ತಂಡ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿತು. ಉತ್ತಮ ಆಟವಾಡಿದ ಕೊಡಗು ಜಿಲ್ಲಾ ತಂಡದ ಆಟಗಾರರು ನಿರೀಕ್ಷೆಯಂತೆ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡ ಕೊಡಗು ಜಿಲ್ಲಾ ತಂಡವನ್ನು 1-0 ಗೋಲುಗಳ ಅಂತರದಿಂದ ಪರಾಭವಗೊಳಿಸಿತು. ಆರಂಭದಿಂದಲೂ ತೀವ್ರ ಪೈಪೋಟಿ ನಡುವೆÀ ಮಂಡ್ಯ ಜಿಲ್ಲಾ ತಂಡದ ಬಾಲಕರು ಅಂತಿಮವಾಗಿ ಏಕೈಕ ಗೋಲು ಗಳಿಸುವ ಮೂಲಕ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ನಿರ್ದೇಶಕ ಸುರೇಶ್ ಸುಬ್ಬಯ್ಯ ಬಹುಮಾನ ವಿತರಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಮೃತ್ಯಂಜಯ, ತಾಲೂಕು ಪರಿವೀಕ್ಷಕಿ ಪಿ.ಡಿ. ರತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ಸುಬ್ಬಯ್ಯ, ಟಿ.ಡಿ. ರಮಾನಂದ, ದೇವನೂರು ಶಾಲೆ ಮುಖ್ಯ ಶಿಕ್ಷಕಿ ಜಾನಕಿ, ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಚಂದ್ರಶೇಖರ್, ಬಿ.ಆರ್‍ಪಿ ಬಿ.ಯು. ಉತ್ತಪ್ಪ, ಸಿಆರ್‍ಪಿಗಳಾದ ಚಿಕ್ಕದೇವರು, ಟಿ.ಬಿ. ಜೀವನ್, ಪ್ರಸನ್ನಕುಮಾರ್ ಹಾಜರಿದ್ದರು.