*ಗೋಣಿಕೊಪ್ಪಲು, ಸೆ. 2: ಸಾಲದ ಹಣವನ್ನು ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಕೂಲಿ ಕಾರ್ಮಿಕನನ್ನು ನಾಯಿ ಗೂಡಿನಲ್ಲಿ ಕೂಡಿ ಹಾಕಿ ಕಚ್ಚಿಸಿದ ಅಮಾನವಿಯ ಘಟನೆಯೊಂದು ಬಾಳೆಲೆ ವ್ಯಾಪ್ತಿಯಲ್ಲಿ ನಡೆದಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹರೀಶ್ (32) ನಾಯಿಯಿಂದ ಕಚ್ಚಿಸಿಕೊಂಡ ವ್ಯಕ್ತಿಯಾಗಿದ್ದಾನೆ.

ಬಾಳೆಲೆ ಗ್ರಾಮದ ಕಿಶಾನ್ ಎಂಬ ವ್ಯಕ್ತಿ ಈ ಹಿಂದೆ ಸಾಲ ಪಡೆದುಕೊಂಡದ್ದನ್ನು ಹಿಂತಿರುಗಿಸದ ಹರೀಶನನ್ನು ಹಿಡಿದು ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಹರೀಶನ ಬಳಿ ಹಣ ಇಲ್ಲದ ಕಾರಣ ಒಂದಷ್ಟು ಸಮಯಾವಕಾಶ ಕೇಳಿಕೊಂಡಿದ್ದ. ಆದರೆ ಈತನನ್ನು ತನ್ನ ಮನೆಗೆ ಕರೆದ್ದೋಯ್ದು ಮೂರು ನಾಯಿಗಳಿದ್ದ ಗೂಡಿನೊಳಗೆ ತಳ್ಳಿದ್ದಾಗಿ ಹೇಳಲಾಗುತ್ತಿದೆ. ನಾಯಿಯ ಧಾಳಿಯಿಂದ ಹರೀಶನ ಕಾಲು, ತಲೆ, ಬೆನ್ನು, ಕೈಗಳಿಗೆ ಗಾಯಗಳಾಗಿದೆ. ನಂತರ ಈತನ ನರಳಾಟವನ್ನು ಕಂಡು ತೋಟ ಮಾಲೀಕನೇ ಮದ್ಯ ಕುಡಿಸಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿ ಮೇಲೆ ಜಾತಿ ನಿಂದನೆ ಪ್ರಕರಣ ದಾಖ ಲಾಗಿದ್ದು, ಡಿ.ವೈ.ಎಸ್.ಪಿ. ನಾಗಪ್ಪ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆ ಉಪನಿರೀಕ್ಷಕ ಮಹೇಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದ್ದು, ತಪ್ಪಿತ್ತಸ್ಥನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.