ಸೋಮವಾರಪೇಟೆ, ಸೆ. 2: ಇಲ್ಲಿನ ಲಯನ್ಸ್ ಸಂಸ್ಥೆಯ ವತಿಯಿಂದ ಸಾಂಕ್ರಾಮಿಕ ರೋಗ ನಿಯಂತ್ರಣದ ಜಾಗೃತಿ ಕಾರ್ಯಾಗಾರ ಸ್ಥಳೀಯ ಒಕ್ಕಲಿಗರ ಸಂಘದ ಕುವೆಂಪು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆಯ ಕ್ರಮಗಳ ಮಾಹಿತಿಯುಳ್ಳ ಕರಪತ್ರ ವಿತರಿಸಲಾಯಿತು. ಪ್ರತಿಯೊಬ್ಬರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಡೆಂಗ್ಯು ಮತ್ತು ಚಿಕನ್‍ಗುನ್ಯಾದಂತಹ ಸಾಂಕ್ರಾಮಿಕ ರೋಗ ಹತೋಟಿ ಸಾಧ್ಯ. ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಲಯನ್ಸ್ ಅಧ್ಯಕ್ಷ ಎ.ಎಸ್.ಮಹೇಶ್ ಹೇಳಿದರು.

ನೀರು ಶೇಖರಣಾ ತೊಟ್ಟಿಗಳನ್ನು ಮುಚ್ಚಿಡಬೇಕು. ಮನೆಯ ಮೇಲೆ ಹಾಗೂ ಸುತ್ತಮುತ್ತ ನೀರು ಸಂಗ್ರಹವಾಗುವಂತಹ ಪ್ಲಾಸ್ಟಿಕ್ ವಸ್ತುಗಳು, ಟಯರ್‍ಗಳು, ಒಡೆದ ತೆಂಗಿನ ಚಿಪ್ಪುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಏರ್‍ಕೂಲರ್, ಹೂವಿಕ ಕುಂಡ, ಫೈಯರ್ ಬಕೆಟ್‍ನಲ್ಲಿ ಸಂಗ್ರಹವಿರುವ ನೀರನ್ನು ವಾರಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಹಗಲಿನಲ್ಲಿ ನಿದ್ದೆ ಮಾಡುವ ಮಕ್ಕಳು ಹಾಗೂ ವಿಶ್ರಾಂತಿ ಪಡೆಯುವವರು ಸೊಳ್ಳೆ ನಿರೋಧಕ ಹಾಗೂ ಪರದೆಗಳನ್ನು ತಪ್ಪದೆ ಬಳಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಮುಖ್ಯ ಶಿಕ್ಷಕಿ ಮಿಲ್‍ಡ್ರೆಡ್ ಗೋನ್ಸಾಲ್ವೆಸ್ ಲಯನ್ಸ್ ಪದಾಧಿಕಾರಿಗಳಾದ ಜಗದೀಶ್, ಮೇಜರ್ ಮಂದಪ್ಪ, ಮಂಜುನಾಥ್ ಚೌಟ ಮತ್ತಿತರರು ಉಪಸ್ಥಿತರಿದ್ದರು.