ಮಡಿಕೇರಿ, ಸೆ. 1 : ನಗರದ ಸುದರ್ಶನ ವೃತ್ತ ಬಳಿಯ ಗುಡ್ಡೆಮನೆ ಅಪ್ಪಯ್ಯಗೌಡ ಪ್ರತಿಮೆ ಸ್ಥಳದ ಸರಪಳಿ ಬೇಲಿಯನ್ನು ತಿಳಿಗೇಡಿಗಳು ಹಾನಿ ಗೊಳಿಸಿರುವ ದೃಶ್ಯ ಗೋಚರಿಸಿದೆ. ಸ್ವಾತಂತ್ರ್ಯ ಸೇನಾನಿ ಗುಡ್ಡೆಮನೆ ಅಪ್ಪಯ್ಯಗೌಡ ಪ್ರತಿಮೆ ಬಳಿ ಎಸಗಿರುವ ಈ ಕೃತ್ಯವನ್ನು ನಿನ್ನೆ ಜರುಗಿದ ಕೆಂಪೇಗೌಡರ ಜಯಂತಿ ವೇಳೆ ಇತಿಹಾಸ ತಜ್ಞ ಚಿಕ್ಕರಂಗೇಗೌಡ ಖಂಡಿಸಿದ್ದರು.

ಆ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮೊದಲಾದವರು ಪರಿಶೀಲಿಸಿದ್ದರು.

ಇಂದು ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮೊದಲಾದವರು ಸ್ಥಳ ಪರಿಶೀಲಿಸಿ, ತಿಳಿಗೇಡಿಗಳ ಇಂತಹ ಕೃತ್ಯ ಖಂಡನೀಯವೆಂದು ಪ್ರತಿಕ್ರಿಯಿಸಿದರು. ಅಲ್ಲದೆ ಸಾಮರಸ್ಯ ಕದಡುವ ದುರುದ್ದೇಶದಿಂದ ಸ್ಮಾರಕಗಳಿಗೆ ಹಾನಿ ಮಾಡುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.

ತಿಳಿಗೇಡಿಗಳ ಕೃತ್ಯವನ್ನು ಖಂಡಿಸಿರುವ ಗುಡ್ಡೆಮನೆ ಅಪ್ಪಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ತುಂತಜೆ ಗಣೇಶ್ ಹಾಗೂ ಕಾರ್ಯದರ್ಶಿ ಎ.ಕೆ. ಪಾಲಾಕ್ಷ, ತಿಳಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.