ಬೆಂಗಳೂರು, ಸೆ. 2: ರಾಜ್ಯ ಜೆಡಿಎಸ್ ನ ಪ್ರಚಾರ ಸಮಿತಿಯ ಅಧ್ಯಕ್ಷ ಹೆಚ್. ವಿಶ್ವನಾಥ್ ಇದೀಗ ಗುಪ್ತಚರದಳ ವರ್ತುಲಕ್ಕೆ ಸಿಲುಕಿಕೊಂಡಿದ್ದಾರೆ

ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ವಿಶ್ವನಾಥ್ ಅವರ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡಲು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ರಾಜ್ಯದ ಗುಪ್ತಚರದಳದ ಪ್ರಮುಖರಿಗೆ ಸೂಚನೆ ನೀಡಿದ್ದಾರೆ ಎಂದಿವೆ.

ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಿದ ಧೋರಣೆಯನ್ನು ಪ್ರತಿಭಟಿಸಿ ವಿಶ್ವನಾಥ್ ಅವರು ಕೈ ಪಾಳೆಯವನ್ನು ತೊರೆದ ಮೇಲೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‍ಗೆ ಸೇರ್ಪಡೆ ಯಾಗಿದ್ದರು.

ಇದೀಗ ವಿಶ್ವನಾಥ್ ಅವರನ್ನು ಪಕ್ಷದ ಪ್ರಚಾರ ಸಮಿತಿಯ ಮುಖ್ಯಸ್ಥ ರನ್ನಾಗಿ ಮಾಡಿರುವ ಜೆಡಿಎಸ್ ನಾಯಕರು,ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಲು ತೀರ್ಮಾನ ಮಾಡಿದ್ದಾರೆ.

ವಿಶ್ವನಾಥ್ ಅವರೂ ತುಂಬಾ ಉತ್ಸಾಹದಿಂದ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ಸದÀ್ಯದಲ್ಲೇ ಅವರೊಂದಿಗೆ ಕುರುಬ ಸಮುದಾಯದ ಹಲವು ನಾಯಕರು ಸೇರಿದಂತೆ ಅಹಿಂದ ಸಮುದಾಯದ ವಿವಿಧ ನಾಯಕರು ಜೆಡಿಎಸ್ ಸೇರ್ಪಡೆಯಾಗುವದು ಬಹುತೇಕ ನಿಶ್ಚಿತವಾಗಿದೆ.

ಹೀಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ವಿಶ್ವನಾಥ್ ಅವರು ವಿಶೇಷವಾಗಿ ಹಿಂದುಳಿದ ಸಮುದಾಯದ ನಾಯಕರ ಜತೆ ಮಾತುಕತೆ ನಡೆಸಿದ್ದು ಈ ಬೆಳವಣಿಗೆಯನ್ನು ತಡೆಗಟ್ಟಲು ಕಾಂಗ್ರೆಸ್ ಹರಸಾಹಸ ನಡೆಸಬೇಕಾದ ಸ್ಥಿತಿ ಎದುರಾಗಿದೆ.

ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸುವ ಜವಾಬ್ದಾರಿ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಆ ಕೆಲಸದಲ್ಲಿ ತಲ್ಲೀನರಾಗಿದ್ದು ಅದೇ ಕಾಲಕ್ಕೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು ಮೂಡಿಸಲು ವಿಶ್ವನಾಥ್ ಹೊರಟಿರುವ ಹೆಜ್ಜೆ ಪ್ರಭಾವಿಯಾಗಿದೆ.

ಇದೇ ಕಾರಣಕ್ಕಾಗಿ ತವರು ಜಿಲ್ಲೆಯಲ್ಲಿಯೇ ವಿಶ್ವನಾಥ್ ಅವರ ಶಕ್ತಿಯನ್ನು ಕುಗ್ಗಿಸಲು ಸಜ್ಜಾಗಿರುವ ಸಿಎಂ ಸಿದ್ದರಾಮಯ್ಯ ಅದೇ ಕಾರಣಕ್ಕಾಗಿ ಇದೀಗ ವಿಶ್ವನಾಥ್ ಅವರ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡಲು ಗುಪ್ತಚರದಳಕ್ಕೆ ಸೂಚನೆ ನೀಡಿದ್ದಾರೆ

ಹೀಗಾಗಿ ಪ್ರತಿ ದಿನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಇಂಟಲಿಜೆನ್ಸ್ ಪ್ರಮುಖರು, ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳ ಜತೆ ವಿಶ್ವನಾಥ್ ಅವರ ದೈನಂದಿನ ಚಟುವಟಿಕೆಗಳ ವಿವರವನ್ನೂ ನೀಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.