ಗೋಣಿಕೊಪ್ಪಲು, ಸೆ. 2: ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಲ್ಯಮುಂಡೂರು ಪಂಚಾಯಿತಿ ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕಿನಲ್ಲಿ 2ನೇ ಸ್ಥಾನದಲ್ಲಿದೆ ಎಂದು ಪಂಚಾಯಿತಿ ಅಧ್ಯಕ್ಷ ಕೊಟ್ಟಂಗಡ ಪ್ರಕಾಶ್ ತಿಳಿಸಿದರು. ಚಿಕ್ಕಮುಂಡೂರು ದವಸ ಭಂಡಾರದ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಕಾಶ್ ಪಂಚಾಯಿತಿಗೆ ಸಕಾಲದಲ್ಲಿ ತೆರಿಗೆ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಇಲ್ಲದವರು ಪಂಚಾಯಿತಿಗೆ ಆಗಮಿಸಿ ದಾಖಲೆಗಳನ್ನು ಒದಗಿಸಿ ಮನೆ ಮಂಜೂರು ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳವಂತೆ ತಿಳಿಸಿದರು. ರಾಜ್ಯದಲ್ಲಿ ಏಕರೀತಿಯ ಕಂದಾಯ ಪರಿಷ್ಕರಣೆಯಾಗಿದ್ದು, ಮುಂದಿನ ದಿನದಲ್ಲಿ ಇದು ಜಾರಿಗೆ ಬರಲಿದೆ ಗ್ರಾಮದ ಜನತೆ ಕಂದಾಯ ನಿಗದಿಪಡಿಸಿಕೊಳ್ಳುವಂತೆ ತಿಳಿಸಿದರು.

ಬಲ್ಯಮುಂಡೂರು ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಸಂಚಾರ ವ್ಯವಸ್ಥೆಯಲ್ಲಿ ಅಪಘಾತಗಳು ಸಂಭವಿಸಿದೆ ಕೂಡಲೇ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮದ ಪ್ರಮುಖರಾದ ಚೀರಂಡ ಕಂದಾ ಸುಬ್ಬಯ್ಯ ಮಾತನಾಡಿ, 14ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರು ಉದ್ಯೋಗ ಖಾತ್ರಿ ಯೋಜನೆಗೂ ಪ್ರಾಮುಖ್ಯತೆ ನೀಡಬೇಕು. ಹಲವು ಕಾಮಗಾರಿಗಳು ಈ ಯೋಜನೆಯಲ್ಲಿ ಮಾಡಬಹು ದಾಗಿದೆ. ಆದ್ದರಿಂದ ಪಂಚಾಯಿತಿ ಅನುದಾನದಲ್ಲಿ ಕಾಮಗಾರಿ ನಡೆಸಲು ಆಸಕ್ತಿ ತೋರುವ ಗುತ್ತಿಗೆದಾರರು ಉದ್ಯೋಗ ಖಾತ್ರಿಗೂ ಆಸಕ್ತಿ ತೋರಬೇಕು ಎಂದು ಸಭೆಯ ಗಮನ ಸೆಳೆದರು. ಪಿ.ಡಿ.ಓ. ಪೂಣಚ್ಚ ಮಾತನಾಡಿ, ಈಗಾಗಲೇ ಮಾಸಿಕ ಸಭೆಯಲ್ಲಿ ಈ ವಿಚಾರದಲ್ಲಿ ಚರ್ಚಿಸಿ ಉದ್ಯೋಗ ಖಾತ್ರಿ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಪಂಚಾಯಿತಿಯ ಉಳಿದ ಕಾಮಗಾರಿಯ ಕೆಲಸವನ್ನು ನೀಡುವಂತೆ ತೀರ್ಮಾನಿಸಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಗಣನೀಯ ಪ್ರಮಾಣದ ಕೆಲಸವಾಗಿದೆ ಎಂದರು. 2018-19ನೇ ಸಾಲಿನ ಕ್ರಿಯಾ ಯೋಜನೆಗೆ ಗ್ರಾಮಸ್ಥರು ಅನುಮೋದನೆ ನೀಡಿದರು.

ತೋಟದ ಲೈನ್ ಮನೆಯಲ್ಲಿ ವಾಸವಿರುವ ಪರಿಶಿಷ್ಟ ವರ್ಗದ ಗಿರಿಜನರು ಮೂಲ ದಾಖಲಾತಿ ಗಳಿಲ್ಲದೇ ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಈ ಬಗ್ಗೆ ಮೇಲಾಧಿಕಾರಿಗಳು ನಮಗೆ ಸುತ್ತೋಲೆ ನೀಡಿ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಗ್ಯ ಕುಟುಂಬ ಕಲ್ಯಾಣದ ಅಧಿಕಾರಿ ಮಾಚಂಗಡ ಮುತ್ತಮ್ಮ ಸಭೆಯ ಗಮನ ಸೆಳೆದು ಮಾತನಾಡಿದರು. ತಾ.ಪಂ. ಸದಸ್ಯ ಪ್ರಕಾಶ್ ಮಾತನಾಡಿ, ಗಿರಿಜನ ಕುಟುಂಬಗಳಿಗೆ ಇಲಾಖೆ ನಿವೇಶನ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಗ್ರಾಮಸ್ಥರು ಗಿರಿಜನ ಕುಟುಂಬಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಮರಳು ಹೆಚ್ಚಾಗಿ ಈ ಭಾಗದಿಂದ ರಾತ್ರಿ ವೇಳೆಯಲ್ಲಿ ಟಿಪ್ಪರ್‍ನಲ್ಲಿ ಸಾಗಿಸುತ್ತಿದ್ದು ಇವುಗಳ ಬಗ್ಗೆ ಕ್ರಮ ವಹಿಸಬೇಕು, ಗ್ರಾಮದ ಜನತೆಗೆ ಮರಳು ಸಿಗುವಂತೆ ಮಾಡಬೇಕೆಂದು ಚೀರಂಡ ಕಂದಾ ಸುಬ್ಬಯ್ಯ ಸಭೆಯಲ್ಲಿ ಗಮನ ಸೆಳೆದರು. ಮನೆಗಳಲ್ಲಿ ಅಕ್ರಮ ಸಾರಾಯಿ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಈ ಬಗ್ಗೆ ಕ್ರಮ ವಹಿಸುವಂತೆ ಬೋಪಣ್ಣ ಸಭೆಯಲ್ಲಿ ಪ್ರಸ್ಥಾಪಿಸಿದರು. ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಯುತ್ತನ್ ಹಾಗೂ ತಾಲೂಕು ಪಂಚಾಯ್ತಿ ಸದಸ್ಯೆ ಮೂಕಳೇರ ಆಶಾಪೂಣಚ್ಚ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡಿರುವದನ್ನು ಸಭೆಯ ಗಮನಕ್ಕೆ ತಂದರು ಕಾನೂರಿನ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಗ್ರಾಮಸ್ಥರಾದ ಚಂದ್ರು ಮನವಿ ಮಾಡಿದರು.

ಗ್ರಾಮದ ಅಭಿವೃದ್ಧಿಗೆ ಸದಸ್ಯರೆಲ್ಲರು ಒಗ್ಗೂಡಿ ಪಂಚಾಯಿತಿಯ ಎಲ್ಲಾ ವಾರ್ಡ್‍ಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕೆಂದು ಗ್ರಾಮಸ್ಥರಾದ ಸೋಮಯ್ಯ, ದೇಯಂಡ ಸುಗುಣ ಸದಸ್ಯರ ಗಮನ ಸೆಳೆದರು.

ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿ ಲಕ್ಷ್ಮಯ್ಯ ಪಾಲ್ಗೊಂಡಿದ್ದರು. ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷರಾದ ವೈ. ಬೋಜಿ, ಸದಸ್ಯರಾದ ಚಿಂಡಮಾಡ ಕುಶಿಕುಮಾರ್, ಬಿ.ಎಸ್. ಪವಿತ್ರ, ಕೊಳೆರ ಬೋಪಣ್ಣ, ಹೆಚ್.ಆರ್. ಇಂದಿರಾ, ವೈ. ಚುಂಡೆ, ಚೀರಂಡ ಸ್ವಾತಿ, ಪ್ರೀತಿ ಪೊನ್ನಪ್ಪ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಳ್ಳಿಚಂಡ ಪೂಣಚ್ಚ ಸ್ವಾಗತಿಸಿ, ವಂದಿಸಿದರು.