ಮಡಿಕೇರಿ, ಸೆ. 1: ಮಡಿಕೇರಿ ದಸರಾ ನಾಡ ಹಬ್ಬ ಸಮೀಸುತ್ತಿದೆ ಇನ್ನು 20 ದಿನಗಳಲ್ಲಿ ನವರಾತ್ರಿ ಉತ್ಸವದೊಂದಿಗೆ ನಗರದೆಲ್ಲೆಡೆ ನಾಲ್ಕು ಕರಗ ದೇವತೆಗಳು ಮನೆ ಮನೆಗಳಿಗೆ ಸಂಚರಿಸಲಿದ್ದು, ಇಲ್ಲಿನ ರಸ್ತೆಗಳ ಪರಿ ಕೇಳುವವರಾರು? ನವರಾತ್ರಿಯ ದಿನಗಳಲ್ಲಿ ಭಕ್ತಿಯ ಪರಾಕಾಷ್ಠೆಯೊಂದಿಗೆ ಬರಿಗಾಲಿನಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಹೊತ್ತು ಸಂಚರಿಸುವವರನ್ನು ಆ ದೇವರೇ ಕಾಪಾಡಬೇಕು. ಇತ್ತ ಜವಾಬ್ದಾರಿಯುತರ ಗಮನ ಅಗತ್ಯ.ಈ ಮೊದಲು ಅವೈಜ್ಞಾನಿಕವಾಗಿ ಕೈಗೊಂಡಿರುವ ನಗರ ಒಳಚರಂಡಿ ಕಾಮಗಾರಿ ಹಾಗೂ ಪ್ರಸಕ್ತ ಮಳೆಯಿಂದ ಮೊದಲೇ ಹದಗೆಟ್ಟಿದ್ದ ರಸ್ತೆಗಳ ದುರವಸ್ಥೆ ಮುಂದಿನ 20 ದಿನಗಳಲ್ಲಿ ಎಷ್ಟರ ಮಟ್ಟಿಗೆ ಕಾಯಕಲ್ಪ ಕಾಣುವಂತಾದೀತು ಕಾದು ನೋಡಬೇಕಷ್ಟೆ.

ನಗರದ ಯಾವ ರಸ್ತೆಯಲ್ಲಿ ಸಂಚರಿಸಿದರೂ ಅಲ್ಲಲ್ಲಿ ಗುಂಡಿಗಳ ನಡುವೆ, ರಾಶಿ ಕಲ್ಲುಗಳು ಎದ್ದು ಹೊಗಿರುವ ಪರಿ ಗಮನಿಸಿದರೆ, ಕರಗ ದೇವತೆಗಳನ್ನು ಶಿರದಲ್ಲಿ ಹೊತ್ತು, ವ್ರತಧಾರಿಗಳು ಸಂಚರಿಸಲು ಎದುರಾಗುವ ವೇದನೆ ಅನುಭವಿಸುವರಿಗಷ್ಟೇ ಅರಿವಾದೀತು.

ಸಂಪ್ರದಾಯದಂತೆ ಕರಗ

ಐತಿಹಾಸಿಕ ದಸರಾ ನಾಡಹಬ್ಬಕ್ಕೆ ಸಂಪ್ರದಾಯದಂತೆ ನವರಾತ್ರಿಯ ಆರಂಭದಿಂದ ವಿಜಯದಶಮಿಯಂದು ಬನ್ನಿ ವೃಕ್ಷ ಪೂಜೆ ತನಕ ಜರುಗಲಿರುವ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವವು ಪರಂಪರಾಗತ

(ಮೊದಲ ಪುಟದಿಂದ) ಹಾದಿಯಲ್ಲೇ ಸಾಗಬೇಕಿದೆ. ಈ ನಿಟ್ಟಿನಲ್ಲಿ ಮಂಟಪ ಸಮಿತಿಗಳು ಹಾಗೂ ಮಡಿಕೇರಿ ದಸರಾ ಸಮಿತಿ ಕೂಡ ತನ್ನ ಆದ್ಯತೆ ನೀಡಬೇಕಿದೆ.

ವರ್ಷಗಳು ಉರುಳಿದಂತೆ ಇಂದು ನಾಲ್ಕು ಶಕ್ತಿ ದೇವತೆಗಳ ಜತೆಗೂಡಿ ಒಟ್ಟು ಹತ್ತು ದೇವಸನ್ನಿಧಿಗಳ ಮಂಟಪೋತ್ಸವ ದೊಂದಿಗೆ ಮಡಿಕೇರಿ ದಸರಾ ನಾಡಹಬ್ಬವು ತನ್ನ ಮೆರುಗು ಹೆಚ್ಚಿಸಿಕೊಂಡಿರುವದು ವಾಸ್ತವ. ಆ ಮಾತ್ರಕ್ಕೆ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಪೂರಕ ಮನ್ನಣೆ ನೀಡುವದು ಜವಾಬ್ದಾರಿಯುತರ ಕರ್ತವ್ಯವೇ ಆಗಿದೆ. ಕಾರಣ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಾದ ಶ್ರೀ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ ( ಶ್ರೀ ಮುತ್ತು ಮಾರಿಯಮ್ಮ) ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವತೆಗಳ ಆರಾಧನೆಗೆ ತುಂಬಾ ವೈಶಿಷ್ಟ್ಯವಿದೆ. ಈ ನಾಲ್ಕು ಶಕ್ತಿ ದೇವತೆಗಳು ಏಕ ರೀತಿಯ ಮಾನ್ಯತೆಯೊಂದಿಗೆ ಸಹೋದರಿಯರೆಂಬ ಖ್ಯಾತಿ ಪಡೆದಿವೆ. ಇಲ್ಲಿ ಬೇಧ ಭಾವ ಸಲ್ಲದೆಂದು ಹಿರಿಯರ ನಂಬಿಕೆ.

ಕಾರಣವೂ ಇದೆ : ನವರಾತ್ರಿಯ ಪರ್ವಕಾಲದಲ್ಲಿ ನಾಲ್ಕು ಕರಗ ದೇವತೆಗಳು ಎಲ್ಲೆಡೆ ಸಂಚರಿಸುತ್ತಾ, ಜನತೆಗೆ ಎದುರಾಗಲಿರುವ ರೋಗರುಜಿನಗಳನ್ನು ದೂರಗೊಳಿಸುವಲ್ಲಿ ಚೌಟಿ ಮಾರಿಯಮ್ಮ ಹರಸುತ್ತಾಳೆ ಎಂಬ ನಂಬಿಕೆ ಜನತೆಯಲ್ಲಿದೆ. ಅಂತೆಯೇ ಶತ್ರುಗಳ ದಂಡು ಧಾಳಿ ಹಿಮ್ಮೆಟ್ಟಿಸುವ ಶಕ್ತಿ ದೇವತೆ ಶ್ರೀ ದಂಡಿನ ಮಾರಿಯಮ್ಮಳಾದರೆ, ನಮ್ಮ ಐತಿಹಾಸಿಕ ಕೋಟೆಗೆ ಕಾವಲಾಗಿ ನಿಂತು ಹರಸುವವಳು ಶ್ರೀ ಕೋಟೆ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ ಸನ್ನಿಧಿ ನಾಡಿಗೆ ಶಾಂತಿ, ಸಮೃದ್ಧಿ ಕಲ್ಪಿಸುತ್ತಾಳೆ ಎಂಬ ಶ್ರದ್ಧೆ ಜನತೆಯಲ್ಲಿದೆ.

ಮನೆ ಬಾಗಿಲಿಗೆ ದೇವತೆಗಳು : ಈ ಮೇಲಿನ ನಂಬಿಕೆಯೊಂದಿಗೆ ನಾಲ್ಕು ಶಕ್ತಿ ದೇವತೆಗಳ ಸನ್ನಿಧಿಯ ಪೂಜಾ ಮೂರ್ತಿಗಳನ್ನು ಪರಂಪರಾಗತವಾಗಿ ಕರಗದ ಕಲಶಗಳಿಗೆ ಆಹ್ವಾನಿಸಿ, ಆ ಮೂಲಕ ಮಂಗಲ ವಾದ್ಯಗಳೊಂದಿಗೆ ಸಂಪ್ರದಾಯಿಕ ಪೂಜೆಯೊಂದಿಗೆ ಮನೆ ಮನೆಗಳಿಗೆ ತೆರಳಿ ಹರಕೆ, ಕಾಣಿಕೆ ಸ್ವೀಕರಿಸುವದು ರೂಢಿಯಲ್ಲಿದೆ.

ನವರಾತ್ರಿಯ ಪರ್ವಕಾಲದಲ್ಲಿ ಹತ್ತು ದಿವಸಗಳ ಕಾಲ ಈ ನಾಲ್ಕು ಕರಗ ದೇವತೆಗಳಿಗೆ ನಿತ್ಯವೂ ಪುಷ್ಪಾಲಂಕಾರ, ಪೂಜೆ, ನೈವೇದ್ಯದೊಂದಿಗೆ ವಾದ್ಯತಂಡ, ನಗರ ಪ್ರದಕ್ಷಿಣೆಗಾಗಿ ಕರಗ ಹೊತ್ತವರೊಂದಿಗೆ ಸಾಗಲು ಈಗಿನ ಕಾಲಕ್ಕೆ ತಕ್ಕಂತೆ ದುಡಿಯುವ ವರ್ಗಕ್ಕೆ ದಿನಗೂಲಿ ಸಹಿತ ಕಳುಹಿಸಿಕೊಡಬೇಕಿದೆ. ಊಟೋಪಚಾರ ಸೇರಿದಂತೆ ರೂ. ಲಕ್ಷಾಂತರ ಖರ್ಚಾಗಲಿದೆ.

ಅಲ್ಪ ಅವಧಿ: ಇನ್ನು ಕೇವಲ 20 ದಿನಗಳಲ್ಲಿ ನವರಾತ್ರಿಯ ಕರಗ ಪೂಜೆಯು ಆರಂಭಗೊಳ್ಳಲಿದ್ದು, ಪ್ರಸಕ್ತ ದಸರಾ ಸಮಿತಿಯಿಂದ ಈ ಅತ್ಯಲ್ಪ ಅವಧಿಯಲ್ಲಿ ಎಲ್ಲ ತಯಾರಿ ನಡೆಯಬೇಕಿದೆ. ನಾಲ್ಕು ಶಕ್ತಿ ದೇವಾಲಯಗಳಲ್ಲಿ ಇತರ ಸನ್ನಿಧಿಗಳನ್ನು ಒಳಗೊಂಡಂತೆ ಒಂದೆಡೆ ಮಂಟಪೋತ್ಸವ ತಯಾರಿಯೂ ನಡೆಯಬೇಕಿದೆ.

ರಸ್ತೆಗಳ ಸ್ಥಿತಿ ಏನು?

ಒಂದೆಡೆ ಭಕ್ತಿ ಭಾವದಲ್ಲಿ ಬರಿಗಾಲಿನಲ್ಲಿ ಕರಗ ದೇವತೆಗಳ ಕಲಶ ಸಹಿತ ಶಿರದಲ್ಲಿ ಹೊತ್ತು ಸಾಗುವವರು ಮಡಿಕೇರಿಯ ರಸ್ತೆಗಳ ಗುಂಡಿಗಳಲ್ಲಿ ಸಾಗಬೇಕಾದ ಪರಿ ನೆನೆಸಿಕೊಂಡರೆ, ಆ ದೇವತೆಗಳಿಗೆ ಪ್ರೀತಿ! ಈ ಬಗ್ಗೆ ಜವಾಬ್ದಾರಿಯನ್ನು ನಗರಸಭೆ ಪ್ರಮುಖರು ದಸರಾ ಆಚರಣೆಯಷ್ಟೇ ಹೊಣೆಗಾರಿಕೆಯಿಂದ ನೋಡಬೇಕಿದೆ. ಇಂದಿನ ಆಧುನಿಕತೆಗೆ ಎಷ್ಟು ಮಾನ್ಯತೆ ನೀಡಲಾಗುತ್ತಿದೆಯೋ, ಅಷ್ಟೇ ಮುಖ್ಯವಾಗಿ ನವರಾತ್ರಿಯ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬರುತ್ತಿರುವ ವ್ಯವಸ್ಥೆಯ ಈ ಕರಗ ಉತ್ಸವಗಳನ್ನು ಪೋಷಿಸಿಕೊಳ್ಳಬೇಕಿದೆ.

ದೈವಿಕ ಆಚರಣೆಗಳ ಕಟ್ಟುಪಾಡು ಉಲ್ಲಂಘಿಸಿದರೆ, ಅದು ನಾಡಿಗೆ ಕೇಡು ಎಂಬ ಭಾವನೆ ಹಿಂದಿನಿಂದಲೂ ಜನಮಾನಸದಲ್ಲಿದೆ. ಹಾಗಾಗಿ ಎಲ್ಲರ ಒಳತಿಗಾಗಿಯೇ ಆಚರಿಸಲ್ಪಡುವ ದಸರಾ ಮತ್ತು ಸಾಂಪ್ರದಾಯಿಕ ಕರಗ ಪೂಜೆಗೂ ಎಲ್ಲರ ಪ್ರೋತ್ಸಾಹ, ಸಹಕಾರ ಹಾಗೂ ಆರ್ಥಿಕ ನೆರವು ಲಭಿಸಿದರೆ, ಇಂತಹ ಆಚರಣೆಗಳು ಮತ್ತಷ್ಟು ಉತ್ಕøಷ್ಟ ಗೊಂಡು ದೇವತಾರಾಧನೆಯಿಂದ ನಾಡಿನ ಜನಕೋಟಿಗೆ ಮಂಗಳ ವಾಗುವದರಲ್ಲಿ ಸಂಶಯವಿಲ್ಲ. - ಚಿತ್ರ, ವರದಿ : ಟಿ.ಜಿ. ಸತೀಶ್