*ಗೋಣಿಕೊಪ್ಪಲು, ಸೆ. 2: ಕಾಡಾನೆಗಳ ಹಿಂಡು ಭತ್ತದ ಗದ್ದೆಯನ್ನು ತುಳಿದು, ಚಿಗುರೊಡೆಯುತ್ತಿರುವ ಪೈರನ್ನು ತಿಂದು ಹಾಳು ಮಾಡಿರುವ ಘಟನೆ ದೇವರಪುರದಲ್ಲಿ ನಡೆದಿದೆ. ಅಲ್ಲಿನ ರಾಜಕುಮಾರ ಎಂಬವರ ಗದ್ದೆಗೆ ನಿತ್ಯವೂ ಬರುವ ಕಾಡಾನೆ ಹಿಂಡು ಭತ್ತದ ಸಸಿ ಚಿಗುರೊಡೆಯುವ ಮುನ್ನವೇ ತಿನ್ನಲು ಶುರುಮಾಡಿವೆ.

ಅರಣ್ಯದಂಚಿನಲ್ಲಿರುವ ಗದ್ದೆಗಳಿಗೆ ಮಳೆ ಕೊರತೆಯ ನಡುವೆಯೂ ಕಷ್ಟಪಟ್ಟು ನಾಟಿ ಮಾಡಿದ್ದರು. ಕಾಲುವೆ, ಚರಂಡಿಗಳ ನೀರಿನ್ನು ಹಾಯಿಸಿಕೊಂಡು ಉಳುಮೆ ಮಾಡಿ ತುಸು ನೀರಾದ ಬಳಿಕ ಭತ್ತದ ಬಿತ್ತನೆ ಮಾಡಿದ್ದರು. ಕೂಲಿ ಕೂಡ ಹೆಚ್ಚಿದ್ದು ಗದೆಯನ್ನು ಪಾಳು ಬಿಡಲಾರದೆ ಕೃಷಿ ಕಾರ್ಯಕೈಗೊಂಡಿದ್ದರು.

ನಡುವೆ ಕಾಡಾನೆಗಳು ಸಂಜೆಯಾದ ಕೂಡಲೇ ನೇರವಾಗಿ ಗದ್ದೆಗೆ ಬಂದು ಭಾರೀ ಪ್ರಮಾಣದ ಹಾನಿಮಾಡುತ್ತಿವೆ. ದೇವರಪುರ, ತಾರಿಕಟ್ಟೆ, ತಿತಿಮತಿ, ಭಾಗಗಳಲ್ಲಿ ಕಾಡಾನೆ ಹಾವಳಿ ಅತಿಯಾಗಿದೆ. ರೈತರು ಕಾಫಿತೋಟ, ಗದ್ದೆಗಳಿಗೆ ಹೋಗಲು ಭಯಪಟ್ಟರೆ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಓಡಾಡಲು ಭಯಪಡುತ್ತಿದ್ದಾರೆ.

ಅರಣ್ಯ ಇಲಾಖೆ ಕಾಡಾನೆಗಳು ಕಾಫಿ ತೋಟ ಹಾಗೂ ಗದ್ದೆಗಳಿಗೆ ಬರದಂತೆ ನೋಡಿಕೊಳ್ಳಬೇಕು. ಬೆಳೆ ನಾಶವಾಗಿರುವದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.