ಕುಶಾಲನಗರ, ಸೆ. 1: ಶ್ರೀ ಗಣಪತಿ ದೇವಸ್ಥಾನ ಸಮಿತಿ ಮತ್ತು ಸ್ಥಳೀಯ ದೇವಸ್ಥಾನಗಳ ಆಶ್ರಯದಲ್ಲಿ ಕುಶಾಲನಗರದ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ದಶಲಕ್ಷ ದೂರ್ವಾರ್ಚನೆ ಹಾಗೂ ಗಣಪತಿ ಅಥರ್ವಶೀರ್ಷಹವನ ಪೂಜಾ ಕಾರ್ಯಕ್ರಮ ನಡೆಯಿತು.

ಮೈಸೂರಿನ ರಾಜ ಗಜ ಇಂದ್ರ ಗುರೂಜಿ ಹಾಗೂ ವೇದಬ್ರಹ್ಮ ಜಿ.ಮಂಜುನಾಥ್ ಭಟ್ ಅವರ ನೇತೃತ್ವದಲ್ಲಿ ನೂರಾರು ಋತ್ವಿಜರಿಂದ ವೈದಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಮಹಾ ಗಣಪತಿ ಸನ್ನಿಧಿಗೆ ಫಲ ಸಮರ್ಪಣೆ, ಪ್ರಾರ್ಥನೆ, ಪ್ರಧಾನ ಸಂಕಲ್ಪ ನಂತರ ದೇವರಿಗೆ ಪಂಚಾಮೃತ ಅಭಿಷೇಕ ನಡೆದ ಬಳಿಕ ದೂರ್ವಾರ್ಚನೆ ಪೂಜಾ ಕಾರ್ಯಕ್ರಮ ಆರಂಭವಾಯಿತು. ಭಕ್ತರು ಗರಿಕೆ ಹುಲ್ಲು ಸಮರ್ಪಿಸಿ ತಮ್ಮ ಹೆಸರಿನಲ್ಲಿ ಪೂಜಾ ಸಂಕಲ್ಪ ನಡೆಸಿದರು. ಮಧ್ಯಾಹ್ನ ಮಹಾಮಂಗಳಾರತಿಯೊಂದಿಗೆ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸಂಜೆ 8 ಗಂಟೆಗೆ ಮಂಗಳಾರತಿ, ಅಷ್ಠಾವಧಾನ ಸೇವೆಗಳು ಜರುಗಿದವು.

ಎರಡು ದಿನಗಳ ಪೂಜಾ ಕಾರ್ಯಕ್ರಮದ ಅಂಗವಾಗಿ ಶನಿವಾರ ದೇವರಿಗೆ ಅಭಿಷೇಕ, ಪಾರಾಯಣ, ದೂರ್ವಾರ್ಚನೆ ನಂತರ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ ರಾವ್, ಜೆ.ಪಿ.ಅರಸ್ ಸೇರಿದಂತೆ ಪ್ರಮುಖರು ಇದ್ದರು.