ಮಡಿಕೇರಿ, ಸೆ. 1: ವೀರಾಜಪೇಟೆ ನಗರದಲ್ಲಿ ತಾ. 5 ರಂದು ರಾತ್ರಿ ಮೆರವಣಿಗೆ ನಡೆಸಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ವಿಸರ್ಜನಾ ಸಂದರ್ಭ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989 ರಲ್ಲಿ ದತ್ತವಾದ ಅಧಿಕಾರದಂತೆ ತಾ. 5 ರ ಸಂಜೆ 5 ಗಂಟೆಯಿಂದ ತಾ. 6 ರ ಬೆಳಿಗ್ಗೆ 10 ಗಂಟೆಯವರೆಗೆ ವೀರಾಜಪೇಟೆ ನಗರದಲ್ಲಿ ವಾಹನಗಳ ಸಂಚಾರವನ್ನು ಬದಲಿ ವ್ಯವಸ್ಥೆಯಂತೆ ನಿರ್ವಹಿಸಲು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆರಕ್ಷಕ ಅಧೀಕ್ಷಕರು ಕೊಡಗು ಜಿಲ್ಲೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಡಿಕೇರಿ ಇವರಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಆದೇಶ ಹೊರಡಿಸಿದ್ದಾರೆ.

ಬದಲಿ ವ್ಯವಸ್ಥೆಯ ಮಾರ್ಗದ ವಿವರ ಇಂತಿದೆ: ಪೆರುಂಬಾಡಿ ಕಡೆಯಿಂದ ವೀರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್‍ರವರ ಕಚೇರಿಯ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡ ಬದಿಯಲ್ಲಿ ಮಾತ್ರ ನಿಲ್ಲಿಸತಕ್ಕದ್ದು.

ಕೇರಳದ ಮಾಕುಟ್ಟ ಮಾರ್ಗವಾಗಿ ಗೋಣಿಕೊಪ್ಪದ ಕಡೆ ಅಥವಾ ಸಿದ್ದಾಪುರದ ಕಡೆಗಳಿಗೆ ಹೋಗುವ ವಾಹನಗಳಿಗೆ ಪೆರುಂಬಾಡಿ ಚೆಕ್‍ಪೋಸ್ಟ್-ಬಾಳುಗೋಡು-ಬಿಟ್ಟಂಗಾಲ ಜಂಕ್ಷನ್-ಕೈಕೇರಿ ಜಂಕ್ಷನ್-ಸಿ.ಎಂ. ಪೂಣಚ್ಚ ಅವರ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ-ಸಿದ್ದಾಪುರಕ್ಕೆ ಹೋಗುವದು. ಅದೇ ರೀತಿ ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳು ಕೈಕೇರಿ-ಬಿಟ್ಟಂಗಾಲ-ಬಾಳುಗೋಡು-ಪೆರುಂಬಾಡಿ ಮಾರ್ಗವಾಗಿ ಕೇರಳದ ಕಡೆ ಹೋಗುವದು.

ಮಡಿಕೇರಿಯಿಂದ ಕೇರಳದ ಕಡೆ ಹೋಗುವ ವಾಹನಗಳು ಸಿದ್ದಾಪುರ-ಪಾಲಿಬೆಟ್ಟ-ಕೈಕೇರಿ-ಬಿಟ್ಟಂಗಾಲ-ಬಾಳುಗೋಡು-ಪೆರುಂಬಾಡಿ-ಮಾಕುಟ್ಟ ಮಾರ್ಗವಾಗಿ ಹೋಗುವದು. ಮಡಿಕೇರಿ ಕಡೆಯಿಂದ ಮೈಸೂರು-ಬೆಂಗಳೂರಿಗೆ ಹೋಗುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣಿಕೊಪ್ಪ-ಮೈಸೂರು-ಬೆಂಗಳೂರಿಗೆ ಹೋಗುವದು. ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ವೀರಾಜಪೇಟೆಗೆ ಬರುವ ವಾಹನಗಳು ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜ್ ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು.

ಗೋಣಿಕೊಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವಂತಹ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ರಸ್ತೆಯ ಎಡಬದಿಯಲ್ಲಿ ಮಾತ್ರ ನಿಲುಗಡೆ ಮಾಡುವದು. ಬೇಟೋಳಿ, ಗುಂಡಿಗೆರೆ, ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವಂತಹ ವಾಹನಗಳು ತಾಲೂಕು ಮೈದಾನದಲ್ಲಿ ಹಾಗೂ ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು. ಮೈಸೂರು-ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ-ಸಿದ್ದಾಪುರ ಮಾರ್ಗವಾಗಿ ಮಡಿಕೇರಿಗೆ ಹೋಗುವದು.

ತಾ. 5 ರಂದು ಸಂಜೆ 5 ಗಂಟೆಯಿಂದ ತಾ. 6 ರ ಬೆಳಿಗ್ಗೆ 10 ಗಂಟೆಯವರೆಗೆ ವೀರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಖ್ಖನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆಯ ವೀರಾಜಪೇಟೆ ತಾಲೂಕು ತಹಶೀಲ್ದಾರ್‍ರವರ ಕಚೇರಿವರೆಗೆ ಹಾಗೂ ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜಿನವರೆಗೆ ಹಾಗೂ ಮಗ್ಗುಲ ಜಂಕ್ಷನ್‍ನಿಂದ ದಖ್ಖನಿ ಮೊಹಲ್ಲಾ ಜಂಕ್ಷನ್‍ವರೆಗೆ ಯಾವದೇ ವಾಹನಗಳನ್ನು ನಿಲ್ಲಿಸುವದನ್ನು ನಿಷೇಧಿಸಲಾಗಿದೆ.

ಈ ವಾಹನ ಸಂಚಾರ ನಿಯಮ ತಾ. 5 ರ ಸಂಜೆ 5 ಗಂಟೆಯಿಂದ ತಾ. 6 ರ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.