ವೀರಾಜಪೇಟೆ, ಸೆ. 1: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ 25ನೇ ರಜತ ಮಹೋತ್ಸವದ ಪ್ರಯುಕ್ತ ಇಂದು ರಾತ್ರಿ 8 ಗಂಟೆಗೆ ಅದ್ದೂರಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಪಿ.ಎ.ಮಂಜುನಾಥ್ ತಿಳಿಸಿದ್ದಾರೆ.

ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್ ತಾ. 25ರಂದು ಗಣೇಶನನ್ನು ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ 5ದಿನಗಳವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸ ಲಾಗಿದ್ದು ಈ ಕಾರ್ಯಕ್ರಮ ಗೌರಿ ಗಣೇಶೋತ್ಸವ ವಿಸರ್ಜನೋತ್ಸವ ದವರೆಗೆ ಮುಂದುವರೆಯಲಿದೆ. ಉತ್ಸವದ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಪ್ರತಿದಿನ ಮಹಾ ಪೂಜಾ ಸೇವೆಯ ನಂತರ ಭಕ್ತಾದಿಗಳಿಗೆÀ ಅನ್ನ ಸಂತರ್ಪಣೆ ನಿರಂತರವಾಗಿದೆ ಎಂದರು.

ತಾ. 2ರಂದು ನಡೆಯುವ ರಾತ್ರಿ 8 ಗಂಟೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಕೆ.ಜಿ.ಬೋಪಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ, ಕದ್ದಣಿಯಂಡ ಹರೀಶ್ ಬೋಪಣ,್ಣ ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ, ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಜಯ ಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಉದ್ಯಮಿ ಅಪ್ಪನೆರವಂಡ ಜಾನ್ಸಿ ಕಿರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ.ಸಲಾಂ, ವಕೀಲರುಗಳಾದ ಸಿ.ಎಸ್.ಜಗದೀಶ್, ಡಿ.ಸಿ ಧ್ರುವ, ಕಾಫಿ ಬೆಳೆಗಾರರಾದ ಮಾಳೇಟಿರ ಕಾಶಿ ಕುಂಞಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ಕೋಟ್ರಂಗಡ ರತಿ ಬಿದ್ದಪ್ಪ, ಉದ್ಯಮಿ ಚೋಪಿ ಜೋಸೆಫ್, ಶಂಕರ್ ಜ್ಯುವೆಲ್ಲರ್ಸ್ ಮಾಲೀಕ ಎಸ್.ಎಚ್. ಮಂಜುನಾಥ್, ಎ.ಎಂ.ಆರ್ ಬಿಲ್ಡರ್ಸ್‍ನ ಸಲೀಂ ಅಕ್ತರ್ ಭಾಗವಹಿಸಲಿದ್ದಾರೆ ಎಂದರು.

ಸನ್ಮಾನ

ಖ್ಯಾತ ರ್ಯಾಲಿಪಟು ಮಾಳೇಟಿರ ಜಗತ್ ನಂಜಪ್ಪ, ಉದ್ಯಮಿ ಹಾಗೂ ಸಮಾಜ ಸೇವಕರಾದ ಚೋಪಿ ಜೋಸೆಫ್, ಚಿಸ್ಕಾಂನ ಸಿಬ್ಬಂದಿ ಆರ್.ಯೋಗರಾಜ್ ಇವರುಗಳನ್ನು ಉತ್ಸವ ಸಮಿತಿಯಿಂದ ಸನ್ಮಾನಿಸಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ಗೌ ಅಧ್ಯಕ್ಷ ಕುಯ್ಮಂಡ ರಾಕೇಶ್ ಬಿದ್ದಪ್ಪ, ರಂಜನ್ ನಾಯ್ಡು, ನಿತೀನ್, ಶಿನೋಜ್, ಚಿಲ್ಲವಂಡ ಗಣಪತಿ ಉಪಸ್ಥಿತರಿದ್ದರು.