ಗೋಣಿಕೊಪ್ಪಲು, ಸೆ. 1: ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ವೀರಾಜಪೇಟೆ ಶಾಖೆ ಹಾಗೂ ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜ ವತಿಯಿಂದ ತಾ. 6 ರಂದು ವೀರಾಜಪೇಟೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮಾಡಲಾಗುವದು ಎಂದು ಬಿಲ್ಲವ ಸಮಾಜ ತಾಲೂಕು ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.

ಗುರುಪೂಜೆ ಮತ್ತು ಭಾವಚಿತ್ರ ಮೆರವಣಿಗೆ ಮೂಲಕ ನಾರಾಯಣ ಗುರುಗಳ 163 ನೇ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸ ಲಾಗುವದು.

ಅಂದು ಬೆಳಿಗ್ಗೆ 9.30 ಕ್ಕೆ ಬಿಟ್ಟಂಗಾಲದ ಅಂಬಟ್ಟಿಯಲ್ಲಿರುವ ಗುರು ಮಂದಿರದಲ್ಲಿ ಗುರುಪೂಜೆ ಮೂಲಕ ಆಚರಣೆಗೆ ಚಾಲನೆ ನೀಡಲಾಗುವದು. ನಂತರ 10.30 ಕ್ಕೆ ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಸ್ಥಾನದಿಂದ ಮೀನುಪೇಟೆಯ ಮುತ್ತಪ್ಪ ದೇವಸ್ಥಾನದವರೆಗೆ ಚಂಡೆ ಮೇಳದೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನೆರವೇರಲಿದೆ ಎಂದರು.

11.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಪ್ರಾಧ್ಯಾಪಕ ಶಿವದಾಸ್ ಗುರುಗಳ ಬಗ್ಗೆ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಬಿಲ್ಲವ ಸಮಾಜ ತಾಲೂಕು ಅಧ್ಯಕ್ಷ ಬಿ ಎಸ್ ಚಂದ್ರಶೇಖರ್, ಎಸ್‍ಎನ್‍ಡಿಪಿ ವೀರಾಜಪೇಟೆ ಶಾಖೆ ಅಧ್ಯಕ್ಷ ಟಿ.ಎ. ನಾರಾಯಣ, ಪಟ್ಟಣ ಪಮಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಬಿಜೆಪಿ ಪ್ರ. ಕಾರ್ಯದರ್ಶಿ ಲೋಕೇಶ್ ಕುಮಾರ್, ಉದ್ಯಮಿ ಬೋಜಪ್ಪ, ಅಚ್ಚುಕುಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸರ್ಕಾರ ಜಿಲ್ಲಾಮಟ್ಟದಲ್ಲಿ ಗುರುಗಳ ಜಯಂತಿ ಆಚರಿಸಲು ಅನುದಾನ ಬಿಡುಗಡೆ ಮಾಡುತ್ತಿದೆ. ನಮ್ಮ ಜನಾಂಗದ ಎಲ್ಲರೂ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದ ಕಾರಣ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಅನುದಾನ ನೀಡುವಂತೆ ಶಾಸಕ ಬೋಪಯ್ಯ ಅವರ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಎಸ್‍ಎನ್‍ಡಿಪಿ ತಾಲೂಕು ಕಾರ್ಯದರ್ಶಿ ದಾಮೋದರ್ ಹೇಳಿದರು.

ಗೋಷ್ಠಿಯಲ್ಲಿ ಬಿಲ್ಲವ ಸಮಾಜ ಕಾರ್ಯದರ್ಶಿ ಜನಾರ್ಧನ್, ಉಪಾಧ್ಯಕ್ಷ ಬಿ ಎಂ ಗಣೇಶ್, ಎಸ್‍ಎನ್‍ಡಿಪಿ ಕಾರ್ಯದರ್ಶಿ ಕೆ.ವಿ. ಸಂತೋಶ್ ಉಪಸ್ಥಿತರಿದ್ದರು.