ವೀರಾಜಪೇಟೆ, ಸೆ. 1: ಮಲೆನಾಡು ಪ್ರದೇಶವನ್ನು ಹೋಲುತ್ತಿರುವ ಕೊಡಗು ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿದೆ. ಕರ್ನಾಟಕದಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿರುವ ಕೊಡಗು ರಾಷ್ಟ್ರದ ಭದ್ರತೆ ನೀಡಿರುವ ಕೊಡುಗೆ ಅಪಾರ. ಕೊಡಗಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಹಕ್ಕುಗಳ ಜಾಗೃತಿಗೆ ಸಂಘಟನೆಯಿಂದ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ: ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್ ಹೇಳಿದರು.

ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ 25ನೇ ವರ್ಷದ ಬೆಳ್ಳಿ ಮಹೋತ್ಸವ ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಯಾವದೇ ಜಾತಿ ಬೇಧವಿಲ್ಲದೆ ಮಾನವ ಹಕ್ಕುಗಳನ್ನು ಜಾಗೃತಿಗೊಳಿಸುವದು ಸಂಘಟನೆಯ ಉದ್ದೇಶವಾಗಿದೆ. ರಾಜ್ಯದ 25 ಜಿಲ್ಲೆಗಳಲ್ಲ್ಲೂ ಜಾಗೃತಿ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಯಾವದೇ ಮೂಲೆಯಲ್ಲಿಯೂ ಮಾನವ ಹಕ್ಕು ಉಲ್ಲಂಘನೆಯಾಗದಂತೆ ಸಂಘಟನೆ ಜಾಗೃತಿಗೆ ಚಾಲನೆ ನೀಡಿದೆ. ಸರಕಾರದ ಯೋಜನೆಗಳಲ್ಲಿ ದಾಖಲೆಯ ಪ್ರಕಾರ ಬರುವ ಬಡವರು, ಕಡು ಬಡವರು ಅರ್ಹ ಫಲಾನುಭವಿಗಳಿಗೆ ಕಾನೂನು ಪ್ರಕಾರ ಸೌಲಭ್ಯಗಳು ದೊರಕದಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆ ಯಾದಂತಾಗುತ್ತದೆ. ಇದರಿಂದಾಗಿ ಸಾಕ್ಷಿ ಸಮೇತ ಸಂಬಂಧಿಸಿದ ಅಧಿಕಾರಿಗಳ ಮೇಲೆ ನೇರವಾಗಿ ಪ್ರಕರಣ ದಾಖಲಿಸಬಹುದು ಎಂದರು.

ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಮಾತನಾಡಿ ಸಾರ್ವಜನಿಕ ವಾಗಿ ಗೌರಿ ಗಣೇಶೋತ್ಸವ ಆಚರಣೆ ಪರಸ್ಪರ ಅನ್ಯೋನ್ಯತೆ, ಪ್ರೀತಿ, ವಾತ್ಸಲ್ಯ ಸುವ್ಯವಸ್ಥೆಯ ಸಮಾಜಕ್ಕೆ ಕಾರಣವಾಗಲಿದೆ. ಇದರಿಂದ ಎಲ್ಲರೂ ಶಾಂತಿ ನೆಮ್ಮದಿಯ ಸಮಾಜವನ್ನು ಬಯಸುತ್ತಾರೆ ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿಯ ನಾಮ ನಿರ್ದೇಶನ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ ಇಂತಹ ಉತ್ಸವಗಳು ಪ್ರತಿಯೊಬ್ಬರಲ್ಲಿಯೂ ಪರಸ್ಪರ ಸಹಕಾರ, ಶಾಂತಿ, ಸೌಹಾರ್ದತೆಗೆ ಸಾಧ್ಯವಾಗಲಿದೆ ಎಂದು ಹೇಳಿದರು.

ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭ ಎ.ವಿ. ಮಂಜುನಾಥ್ ದಂಪತಿಯ ಪುತ್ರಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿವೇದಿತಾಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಿಜೆಪಿ ನಗರ ಸಮಿತಿ ಅಧ್ಯಕ್ಷ ಅಂಜಪರವಂಡ ಅನಿಲ್, ಕಾಫಿ ಬೆಳೆಗಾರರಾದ ಬೊಪ್ಪಂಡ ಜೂನಾ, ಕಾಳೇಂಗಡ ಜೈನ್ ತಿಮ್ಮಯ್ಯ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಎಚ್. ಮೊೈನುದ್ದೀನ್, ಉದ್ಯಮಿಗಳಾದ ಸಿ.ಕೆ.ರಂಜನ್, ಬಿ.ಎಸ್.ಸತೀಶ್. ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಸಮಿತಿಯ ಗೌರವ ಅಧ್ಯಕ್ಷ ರಾಕೇಶ್ ಬಿದ್ದಪ್ಪ, ಮಾಳೇಟಿರ ಕಾಶಿ ಕುಂಞಪ್ಪ ಉಪಸ್ಥಿತರಿದ್ದರು. ಸಮಿತಿಯ ಕೆ.ಕೆ.ಶಶಿಧರ್ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ಕಲ್ಲಡ್ಕದ ಮಾಯಲೋಕ ಶ್ಯಾಮ್ ಜಾದೂಗರ್ ಬಳಗದವರಿಂದ ಜಾದೂ, ಹಾಡು ಹಾಗೂ ಮಿಮಿಕ್ರಿ ನೆರವೇರಿತು.