ಸೋಮವಾರಪೇಟೆ, ಸೆ. 2: ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಇಲ್ಲಿನ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ನೀಡುವ ಪ್ರೋತ್ಸಾಹ ಧನದ ಚೆಕ್ ಅನ್ನು ವಿತರಿಸಲಾಯಿತು.

ಇಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದ ರೋಷಿತಾ ಟಿ.ಎಂ., ರೋಜಾ ಬಿ.ಆರ್., ಅರ್ಪಿತಾ ಸಿ.ಪಿ., ಮಮತಾ ಎಸ್.ಆರ್., ಶ್ವೇತ ಎಚ್.ವಿ., ಪೂಜಿತ ಕೆ.ಪಿ., ವರಲಕ್ಷ್ಮಿ ಬಿ.ಟಿ., ಮಧುರ ಕೆ.ಎಸ್., ಅರ್ಪಿತ ಜಿ.ವಿ., ಪ್ರೀತಿ ಕೆ.ಎಂ., ಕೌಶಿಕ್ ಎಸ್.ಎಲ್. ಇವರುಗಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ಪ್ರೋತ್ಸಾಹ ಧನದ ಚೆಕ್ ವಿತರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ವಿದ್ಯಾರ್ಥಿ ನಿಲಯದಲ್ಲಿ ತಂಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ಓದಿಕೊಳ್ಳಲು ಹಾಗೂ ಸಹ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿಕೊಂಡು ಕಲಿಯಲು ಹೆಚ್ಚಿನ ಅವಕಾಶವಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಮಾತನಾಡಿ, ವಿದ್ಯಾರ್ಥಿ ನಿಲಯದಲ್ಲಿ ತಂಗುವ ವಿದ್ಯಾರ್ಥಿಗಳ ಬಗ್ಗೆ ಪೋಷಕರೂ ಹೆಚ್ಚಿನ ನಿಗಾ ವಹಿಸುತ್ತಿರಬೇಕು. ವಿದ್ಯಾರ್ಥಿಗಳು ಮೊಬೈಲ್ ಜಗತ್ತಿನಿಂದ ಹೊರಬಂದು ಓದಿನ ಕಡೆ ಹೆಚ್ಚು ಗಮನ ಕೊಡಬೇಕೆಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಬಿಸಿಎಂ ತಾಲೂಕು ವಿಸ್ತರಣಾಧಿಕಾರಿ ಸ್ವಾಮಿ, ನಿಲಯ ಮೇಲ್ವಿಚಾರಕಿ ರಮಾದೇವಿ ಉಪಸ್ಥಿತರಿದ್ದರು.