ವೀರಾಜಪೇಟೆ, ಸೆ. 4: “ಕಾನೂನಿನಿಂದ ತಡೆಯಲು ಸಾಧ್ಯವಾಗದೆ ಇರುವ ಕೃತ್ಯಗಳು ಮನಃ ಪರಿವರ್ತನೆಯಿಂದ ತಡೆಯುವದು ಸಾಧ್ಯ. ಅಪರಾಧ ವೆಸಗುವದಕ್ಕಿಂತ ಮೊದಲು ಸ್ವಯಂ ಅವಲೋಕನ ಅಗತ್ಯ” ಎಂದು ವೀರಾಜಪೇಟೆ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶ ಬಿ. ಕೆ. ಮನು ಹೇಳಿದ್ದಾರೆ. ವೀರಾಜಪೇಟೆ ಸಮೀಪದ ಪೆರಂಬಾಡಿಯ ಶಂಷುಲ್ ಉಲೆಮಾ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ಆಸಿಡ್ ಧಾಳಿ ಸಂತ್ರಸ್ತರಿಗೆ ಕಾನೂನು ನೆರವು:ವಿದ್ಯಾರ್ಥಿಗಳಿಗೆ ಮಾಹಿತಿ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಆಸಿಡ್ ಧಾಳಿ ನಡೆಸುವದರ ಮೂಲಕ ವೈಯಕ್ತಿಕ ದ್ವೇಷ ಸಾಧಿಸುವದು ಅಮಾನವೀಯ ಕೃತ್ಯವಾಗಿದೆ. ಇಂತಹ ಮೃಗೀಯ ಕೃತ್ಯಗಳಿಂದ ಯುವಜನತೆ ದೂರವಿರಬೇಕು. ದೇಶದ ಕಾನೂನು ಈ ಬಗೆಯ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ಒದಗಿಸುತ್ತಿದೆ ಎಂದರು.

ತಾಲೂಕು ಕಾನೂನು ಸೇವೆಗಳ ನೆರವು ಸಮಿತಿ ವೀರಾಜಪೇಟೆ ವಕೀಲರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು. ಸಿ. ಪಿ. ಎಂ. ಬಷೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್. ಗೋಪಾಲ ಕೃಷ್ಣ ಕಾಮತ್, ಕಾಲೇಜು ವ್ಯವ್ಥಾಪಕ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್, ವಕೀಲರುಗಳಾದ ಅನುಪಮಾ ಕಿಶೋರ್, ಪಿ.ಎ.ಫವಾಝ್ ಹಾಗೂ ಎ.ಎಸ್.ಸಲ್ಮಾ ಈ ಸಂದರ್ಭದಲ್ಲಿ ವಿಷಯದ ಕುರಿತು ಮಾತನಾಡಿದರು. ಪ್ರಾಂಶುಪಾಲೆ ಎನ್. ಜಿ. ಭಾನುಮತಿ ಸ್ವಾಗತಿಸಿದರು.