ಗೋಣಿಕೊಪ್ಪಲು, ಸೆ. 4: ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ಶೋಭಾಯಾತ್ರೆ ಮೂಲಕ ಗೋಣಿಕೊಪ್ಪ ದಸರಾ ಅಚರಣೆಗೆ ಮೆರಗು ನೀಡುತ್ತಿರುವ ಮಂಟಪ ಸಮಿತಿಗಳಿಗೆ ತಲಾ 1 ಲಕ್ಷ ರೂ. ಅನುದಾನ ನೀಡುವ ಚಿಂತನೆ ಇದೆ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಭಿಪ್ರಾಯಪಟ್ಟರು.

ಗೋಣಿಕೊಪ್ಪಲು ದಸರಾದಲ್ಲಿ ತೇರು ಅನಾವರಣಗೊಳಿಸುವ ಮೂಲಕ ತಮ್ಮದೇ ಆದ ಕಾಣಿಕೆ ನೀಡುತ್ತಿರುವ ವಿವಿಧ ಮಂಟಪ ಸಮಿತಿಗಳೊಂದಿಗೆ ಗೋಣಿಕೊಪ್ಪಲು ಪ್ರೆಸ್ ಕ್ಲಬ್ ವತಿಯಿಂದ ನಡೆದ ಮುಕ್ತ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿವಿಧ ಮಂಟಪ ಸಮಿತಿಗಳ ಪದಾಧಿಕಾರಿಗಳ ಮನವಿಯಂತೆ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದರು.

ಸರ್ಕಾರದಿಂದ ರೂ. 50 ಲಕ್ಷ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಅನುದಾನ ಹೆಚ್ಚು ಬಂದಷ್ಟು ಮಂಟಪ ಸಮಿತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವದು. ಗೋಣಿಕೊಪ್ಪಲು ದಸರಾ ಇಲ್ಲಿವರೆಗೂ ನಡೆದುಕೊಂಡು ಬರಲು ಸಮಿತಿಗಳ ಕಾಣಿಕೆ ಬಹುದೊಡ್ಡದು. ವಿಜಯದಶಮಿ ಯಂದು ನಡೆಯುವ ಶೋಭಾಯಾತ್ರೆ ಯಲ್ಲಿ ಸಾವಿರಾರು ಕಲಾಭಿಮಾನಿಗಳು ಗೋಣಿಕೊಪ್ಪಲು ದಸರಾಕ್ಕೆ ಬರುವಂತಾಗಿದೆ.

ಸಮಿತಿಗಳ ಆತಂಕ : ಕಳೆದ ಬಾರಿ ನಡೆದ ದಸರಾ ಆಚರಣೆಯಲ್ಲಿ ಸರ್ಕಾರದ ಅನುದಾನದಲ್ಲಿ ಮಂಟಪ ಸಮಿತಿಗಳಿಗೆ ಅನುದಾನ ನೀಡದೆ ಇರುವದರಿಂದ ಸಮಿತಿಗಳು ಸಾಲದಲ್ಲಿ ಮುಳುಗಿದೆ. ಈ ಬಾರಿ ಕಾವೇರಿ ದಸರಾ ಸಮಿತಿಯಿಂದ ಅನುದಾನ ದೊರೆಯದಿದ್ದಲ್ಲಿ ಮಂಟಪ ಅನಾವರಣಕ್ಕೆ ತೊಡಕ್ಕಾಗಲಿದೆ ಎಂದು ಮಂಟಪ ಸಮಿತಿಗಳ ಪದಾಧಿಕಾರಿ ಗಳು ಆತಂಕ ವ್ಯಕ್ತಪಡಿಸಿದರು.

ಸಮಿತಿಯಲ್ಲಿ ಶೇ. 90 ರಷ್ಟು ಕಾರ್ಮಿಕರಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು ದಸರಾ ಆಚರಣೆಗಾಗಿ ಹಣ ಹೊಂದಿಸಿ ಲಕ್ಷಾಂತರ ರೂ ವೆಚ್ಚದಲ್ಲಿ ತೇರು ಅನಾವರಣಗೊಳಿಸುತ್ತಿದ್ದೇವೆ ಎಂದು ಸಮಿತಿ ಪ್ರಮುಖರು ಹೇಳಿದರು.

ಸ್ಪರ್ಧೆಯಾಗಿ ತೇರು ಅನಾವರಣಗೊಳಿಸುತ್ತಿದ್ದೇವೆ. ಸ್ಪರ್ಧೆಯಲ್ಲಿ ವಿಜೇತರನ್ನು ಆಯ್ಕೆ ಮಾಡುವಾಗ ನಿರ್ದಿಷ್ಟ ಸ್ಥಳ ಹಾಗೂ ಪಾರದರ್ಶಕವಾಗಿ ತೀರ್ಪು ನೀಡಲು ಕಾವೇರಿ ದಸರಾ ಸಮಿತಿ ಜವಬ್ದಾರಿ ತೆಗೆದುಕೊಳ್ಳಬೇಕು. ತೀರ್ಪು ನೀಡುವ ಮುನ್ನ ತೀರ್ಪುಗಾರರು ಯಾವ ಸ್ಥಳದಲ್ಲಿ ತೀರ್ಪಿಗಾಗಿ ಪರಿಶೀಲನೆ ನಡೆಸುತ್ತಾರೆ ಎಂಬುವುದನ್ನು ನಿಗದಿ ಪಡಿಸಬೇಕು. ಮುಖ್ಯರಸ್ತೆಯ ಒಂದೇ ಕಡೆ ತೀರ್ಪಿನ ಘೋಷಣೆ ಮಾಡಬೇಕು ಎಂದು ಕಾಡ್ಲಯ್ಯಪ್ಪ ದಸರಾ ಸಮಿತಿ ಪ್ರಮುಖರಾದ ಅಮ್ಮತ್ತೀರ ವಿಕ್ರಂ ಒತ್ತಾಯಿಸಿದರು.

ನಾಡಹಬ್ಬ ದಸರಾ ಸಮಿತಿ ವಿಜಯದಶಮಿಯಂದು ಮೆರವಣಿಗೆಯಲ್ಲಿ ಹೆಚ್ಚಿನ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಬೇಕಾದರೆ ಹೆಚ್ಚಿನ ಅನುದಾನ ಅವಶ್ಯಕತೆ ಇದೆ ಎಂದು ನಾಡಹಬ್ಬ ದಸರಾ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ಹೃಷಿ ಕಾವೇರಪ್ಪ ಒತ್ತಾಯಿಸಿದರು.

ಆಯುಧಪೂಜೆ ಮತ್ತು ವಿಜಯದಶಮಿಯಂದು ವಿವಿಧ ಸಮಿತಿಗಳು ಅನ್ನದಾನ ನೀಡುತ್ತಿದ್ದಾರೆ. ಬೇರೆ ಬೇರೆ ಸಮಿತಿಗಳು ನೀಡುವ ಅನ್ನದಾನವನ್ನು ಪ್ರತ್ಯೇಕ ದಿನಗಳಲ್ಲಿ ಬಸ್ ನಿಲ್ದಾಣದಲ್ಲಿ ನೀಡಲು ಚಿಂತನೆ ನಡೆಸಬೇಕು ಎಂದು ಸರ್ವರ ದಸರಾ ಸಮಿತಿ ಅಧ್ಯಕ್ಷ ಪರಶುರಾಮ್ ಹಾಗೂ ನವಚೇತನಾ ದಸರಾ ಸಮಿತಿ ಅಧ್ಯಕ್ಷ ಕರ್ಣರಾಜ್ ಹೇಳಿದರು.

ಸ್ತಬ್ದಚಿತ್ರ ಮೆರವಣಿಗೆ ಸಂದರ್ಭ ನಾಡಹಬ್ಬ ದಸರಾ ಸಮಿತಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ಕಾವೇರಿ ದಸರಾ ಸಮಿತಿಯು ವಿವಿಧ ಕಲೆಗಳನ್ನು ಅನಾವರಣ ಗೊಳಿಸಲು ಯೋಜನೆ ರೂಪಿಸುತ್ತಿದೆ. ಹೆಚ್ಚಿನ ಕಲೆಗಳ ಸ್ತಬ್ದಚಿತ್ರದೊಂದಿಗೆ ಸಾಗುವಾಗ ಮತ್ತಷ್ಟು ಕಳೆ ತರಲಿದೆ ಎಂದು ಪ್ರಮೋದ್ ಗಣಪತಿ ಹೇಳಿದರು.

ಗೊಂದಲ : ಕಳೆದ ಬಾರಿ ಎರಡು ತಂಡಗಳಿಂದ ಮಹಿಳಾ ದಸರಾ ಆಚರಿಸಿ ಒಂದು ಸಮಿತಿಗೆ ಮಾತ್ರ 50 ಸಾವಿರ ಅನುದಾನ ಕಾವೇರಿ ದಸರಾ ಸಮಿತಿಗೆ ನೀಡಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಇದರಂತೆ ಕಳೆದ ಬಾರಿಯ ಲೆಕ್ಕಪತ್ರ ಮಂಡನೆಯಾದ ನಂತರವೂ ಜೆನ್ನಿ ಕಲಾ ತಂಡಕ್ಕೆ ಹಣ ಇತ್ತೀಚೆಗಷ್ಟೆ ನೀಡುತ್ತಿರುವದು ಗೊಂದಲಕ್ಕೆ ಕಾರಣವಾಗಿದೆ. ರೂ. 10 ಲಕ್ಷ ಹಣದ ಲೆಕ್ಕಪತ್ರ ನೀಡಿ ಮತ್ತೆ ಹಣ ನಿಡುತ್ತಿರುವದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಮಿತಿ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಅನುದಾನಕ್ಕೆ ನಿಯೋಗ : ಈಗಾಗಲೇ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ ಅವರನ್ನು ಬೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಿದ್ದೇವೆ. ರೂ. 50 ಲಕ್ಷ ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಅವರು ಕೂಡ ಸಲಹೆ ನೀಡಿದ್ದಾರೆ. ತಾ. 7 ರಂದು ಮುಖ್ಯಮಂತ್ರಿ ಬಳಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ತೆರಳಿ ಅನುದಾನಕ್ಕೆ ಒತ್ತಾಯಿಸಲಿದ್ದೇವೆ. ಸರ್ಕಾರ ನೀಡುವ ಅನುದಾನ ಗೋಣಿಕೊಪ್ಪಲು ದಸರಾವನ್ನು ಅಚ್ಚುಕಟ್ಟಾಗಿ ಆಚರಿಸಲು ಉತ್ತೇಜನ ನೀಡಲಿದೆ ಎಂದು ಪ್ರಮೋದ್ ಗಣಪತಿ ಹೇಳಿದರು.

ಈ ಸಂದರ್ಭ ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚೇಂದೀರ ಪ್ರಭಾವತಿ, ನಮ್ಮ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಸೋಮಣ್ಣ ಉಪಸ್ಥಿತರಿದ್ದರು. ಅಜ್ಜಮಾಡ ಕುಶಾಲಪ್ಪ ಪ್ರಾರ್ಥಿಸಿ, ರಾಕೇಶ್ ಕೊಡಗು ಸ್ವಾಗತಿಸಿ, ಹೆಚ್ ಕೆ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.