ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯ ಚಿಕ್ಕ ಅಳುವಾರ ಗ್ರಾಮದಲ್ಲಿ ಕೊಡಗು ಪೊಲೀಸ್ ತರಬೇತಿ ಕೇಂದ್ರದ ಸ್ಥಾಪನೆಗಾಗಿ, ರಾಜ್ಯ ಸರಕಾರದಿಂದ ಎಂಬತ್ತು ಎಕರೆ ಜಾಗ ಮಂಜೂರಾಗಿದ್ದು, ಈ ಜಾಗಕ್ಕೆ ಸಂಬಂಧಪಟ್ಟಂತೆ ಸರ್ವೆ ಕಾರ್ಯ ನಡೆಯಬೇಕಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಖಚಿತಪಡಿಸಿದ್ದಾರೆ.

ಚಿಕ್ಕಅಳುವಾರದಲ್ಲಿ ಪೊಲೀಸ್ ತರಬೇತಿ ಕೇಂದ್ರದ ಸ್ಥಾಪನೆ ಕುರಿತು ‘ಶಕ್ತಿ’ ಗಮನ ಸೆಳೆದಾಗ, ಈ ಬಗ್ಗೆ ಪ್ರತಿಕ್ರಿಯಿಸಿದ ರಾಜೇಂದ್ರ ಪ್ರಸಾದ್, ಸರಕಾರದಿಂದ ಈಗಾಗಲೇ ಮಂಜೂರಾಗಿರುವ ಜಾಗದ ಸರ್ವೆ ಕೆಲಸ ಇನ್ನಷ್ಟೇ ಆಗಬೇಕೆಂದು ತಿಳಿಸಿದರಲ್ಲದೆ, ಪೊಲೀಸ್ ಇಲಾಖೆ ಈ ಬಗ್ಗೆ ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ವ್ಯವಹರಿಸುತ್ತಿರುವದಾಗಿ ಸುಳಿವು ನೀಡಿದರು.

ಪೊಲೀಸ್ ತರಬೇತಿ ಕೇಂದ್ರಕ್ಕೆ ಮಂಜೂರಾಗಿರುವ ಜಾಗದ ಸರ್ವೆ ಬಳಿಕ ಸರಹದ್ದು ಗುರುತಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ಅವರು, ವರ್ಷದಿಂದ ವರ್ಷಕ್ಕೆ ಪೊಲೀಸ್ ಸಿಬ್ಬಂದಿಯ ಸಂಖ್ಯೆಯು ಜನಸಂಖ್ಯೆಗೆ ಅನುಗುಣವಾಗಿ ಅಧಿಕಗೊಳ್ಳಲಿದ್ದು, ಹೊಸದಾಗಿ ನೇಮಿಸಲ್ಪಡುವವರಿಗೆ ತರಬೇತಿಗಾಗಿ ಕೇಂದ್ರದ ಅವಶ್ಯಕತೆ ಇರುವದಾಗಿ ಮಾಹಿತಿ ನೀಡಿದರು.

ಕೂಡಿಗೆ ವರದಿ

ರಾಜ್ಯ ಸರ್ಕಾರದಿಂದ ಈಗಾಗಲೇ ಪೊಲೀಸ್ ತರಬೇತಿ ಕೇಂದ್ರ ತೆರೆಯಲು ಕುಶಾಲನಗರ ಹೋಬಳಿಯ ತೊರೆನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಅಳುವಾರದಲ್ಲಿ 80 ಎಕರೆ ಜಾಗವನ್ನು ಗುರುತಿಸಲಾಗಿದೆ. ಎಲ್ಲಾ ಸೌಕರ್ಯಗಳು ಇದ್ದು, ಈ ಪ್ರದೇಶಕ್ಕೆ ಹತ್ತಿರವಾಗಿರುವ ನಗರಗಳು ಇರುವದರಿಂದ ಚಿಕ್ಕಅಳುವಾರದಲ್ಲಿ ಪೊಲೀಸ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಕುಶಾಲನಗರದ ಅನೇಕ ಪ್ರಮುಖರು ಪ್ರಯತ್ನಿಸಿದ ಫಲವಾಗಿ ಸರ್ಕಾರ ಜಾಗವನ್ನು ಮಂಜೂರು ಮಾಡಿದ್ದು, ಇದೀಗ ಈ ಜಾಗವು ಕೆಲವು ಭಾಗಗಳಲ್ಲಿ ಒತ್ತುವರಿಯಾಗಿರು ವದು ಕಂಡು ಬರುತ್ತಿದೆ.

ಈ ಪ್ರದೇಶದಲ್ಲಿ ಪೊಲೀಸ್ ತರಬೇತಿ ಕೇಂದ್ರವನ್ನು ತೆರೆಯುವದ ರಿಂದ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಪೊಲೀಸರ ಸಂಖ್ಯೆ ಹೆಚ್ಚಿಸುವದು ಹಾಗೂ ಜಿಲ್ಲೆಯಲ್ಲಿ ಇರುವ ಮುಖ್ಯ ಪಟ್ಟಣಗಳಲ್ಲಿ ಸಂಚಾರಿ ಹಾಗೂ ಕಾನೂನಿನ ಸುವ್ಯವಸ್ಥೆ ಕಾಪಾಡಲು ಅನುಕೂಲ ವಾಗುವದರ ಜೊತೆಗೆ ಸ್ಥಳೀಯರಿಗೂ ಉದ್ಯೋಗದ ಅವಕಾಶ ದೊರೆಯುತ್ತದೆ.

ಈಗಾಗಲೇ ರಾಜ್ಯ ಸರ್ಕಾರ ಪೊಲೀಸ್ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ರಾಜ್ಯದ ಮೂರು ಕೇಂದ್ರಗಳಲ್ಲಿಯೇ ತರಬೇತಿ ನೀಡುತ್ತಿದೆ. ಅದೇ ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಪೊಲೀಸ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರ ಕಾದಿರಿಸಿರುವ ಹಣವನ್ನು ವಿನಿಯೋಗಿಸಬೇಕೆಂಬದು ಸಾರ್ವಜನಿಕರ ಬೇಡಿಕೆಯು ಆಗಿದೆ.

ಈಗಾಗಲೇ ಈ ಜಾಗಕ್ಕೆ ಪೊಲೀಸ್ ಇಲಾಖೆಯ ಜಿಲ್ಲಾ ಉನ್ನತಾಧಿಕಾರಿ ಸೇರಿದಂತೆ ರಾಜ್ಯ ಮಟ್ಟದ ಅಧಿಕಾರಿಗಳು ಸ್ಥಳಪರಿಶೀಲಿಸಿ ತೆರಳಿರುತ್ತಾರೆ. ತರಬೇತಿಗೆ ಸೂಕ್ತವಾದ ಸ್ಥಳವು ಇದಾಗಿದೆ ಎಂದು ನಮೂದಿಸಲ್ಪಟ್ಟಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹೆಚ್ಚು ಪ್ರಯತ್ನ ಪಟ್ಟಲ್ಲಿ ಸರ್ಕಾರ ಕಾದಿರಿಸಿದ ಹಣವನ್ನು ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಪ್ರಾರಂಭಿಸಲು ಅವಕಾಶವಾಗಲಿದೆ.

ತರಬೇತಿ ಕೇಂದ್ರದ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ತರಬೇತಿ ಕೇಂದ್ರವನ್ನು ತೆರೆಯಲು ಬೇಕಾಗುವಂತಹ ವ್ಯವಸ್ಥೆ ಹಾಗೂ ಪತ್ರ ವ್ಯವಹಾರಕ್ಕೆ ಪ್ರಯತ್ನ ಪಟ್ಟಲ್ಲಿ ಸುಗಮವಾಗಿ ಕೇಂದ್ರದ ಕಾಮಗಾರಿಗಳನ್ನು ನಡೆಸಲು ಯೋಜನೆಗಳನ್ನು ರೂಪಿಸ ಬಹುದಾಗಿದೆ. ಹೆಚ್ಚು ಗಮನಹರಿಸ ಬೇಕೆಂಬದು ಕುಶಾಲನಗರ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.

ವರದಿ: ಕೆ.ಕೆ. ನಾಗರಾಜಶೆಟ್ಟಿ