ಸಿದ್ದಾಪುರ, ಸೆ. 4: ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ ವತಿಯಿಂದ ಶ್ರೀ ನಾರಾಯಣ ಗುರುಗಳ 163 ನೇ ಜಯಂತಿಯನ್ನು ತಾ. 6 ರಂದು ಸಿದ್ದಾಪುರದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎನ್.ಡಿ.ಪಿ ಯೂನಿಯನ್ ಸಂಯೋಜಕ ಕೆ.ಎನ್ ವಾಸು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಕೊಡಗು ಯೂನಿಯನ್ ವತಿಯಿಂದ ವರ್ಷಂಪ್ರತಿ ಗುರುಗಳ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಬಾರಿಯೂ ಆಚರಿಸಲು ತೀರ್ಮಾನಿಸಿದ್ದು, ಅಂದು ಬೆಳಗ್ಗೆ 9 ಗಂಟೆಗೆ ಗುರುಪೂಜೆ, 9.30 ಕ್ಕೆ ಪೃಥ್ವಿ ಕರುಣಾಕರನ್ ದ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಬಳಿಕ 10.30 ಕ್ಕೆ ಸಿದ್ದಾಪುರದ ಅಯ್ಯಪ್ಪ ದೇವಾಲಯದಿಂದ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಅಲಂಕೃತ ಮಂಟಪದಲ್ಲಿ ವಾದ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಬಳಿಕ ಸಿದ್ದಾಪುರದ ಶ್ರೀ ನಾರಾಯಣ ನಗರ (ಸ್ವರ್ಣಮಾಲ)ಕ್ಕೆ ಬರಲಿದೆ.

ಅಪರಾಹ್ನ 1.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಸ್.ಎನ್.ಡಿ.ಪಿ ಯೋಗಂ ದೇವಸಂ ಕಾರ್ಯದರ್ಶಿ ಸಂತೋಷ್ ಅರಯಕಂಡಿ ಉದ್ಘಾಟಿಸಲಿದ್ದು, ಯೂನಿಯನ್ ಸಂಯೋಜಕ ಕೆ.ಎನ್ ವಾಸು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂನಿಯನ್ ಅಧ್ಯಕ್ಷ ಕೆ.ಜಿ ಬಾಲಕೃಷ್ಣ ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಕೇರಳದ ವಲ್ಸನ್ ತಿಲ್ಲಂಗೇರಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್ ಸಿತಾರಾಂ, ಶಾಸಕ ಕೆ.ಜಿ ಬೋಪಯ್ಯ, ಜಿ.ಪಂ ಅಧ್ಯಕ್ಷ ಬಿ.ಎ ಹರೀಶ್, ಅಹಿಂದ ಮುಖಂಡ ಟಿ.ಪಿ ರಮೇಶ್, ಮಾಜಿ ಸಚಿವ ಜೀವಿಜಯ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ಜಿ.ಪಂ ಸದಸ್ಯರಾದ ಸುನಿತಾ ಮಂಜುನಾಥ್, ಸರಿತಾ ಪೂಣಚ್ಚ, ತಾ.ಪಂ ಸದಸ್ಯ ಜನೀಶ್, ಗ್ರಾ.ಪಂ ಅಧ್ಯಕ್ಷ ಮಣಿ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಭಾರತೀಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ, ಪದವಿ ವ್ಯಾಸಾಂಗ ಮಾಡುತ್ತಿರುವ ಕಡು ಬಡ ವಿಧ್ಯಾರ್ಥಿಗಳಿಗೆ ಸಹಾಯಧನ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನಡೆಯಲಿದೆ. ಅಪರಾಹ್ನ 3.30 ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಸಂಘಟನೆ ವತಿಯಿಂದ ಕಡು ಬಡವರ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಹಾಗೂ ಬಡವರ ಚಿಕಿತ್ಸೆಗೆ ಸಹಾಯಧನ ನೀಡಲಾಗಿದೆ. ಅಲ್ಲದೆ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಸದಸ್ಯರಿಗೆ ಸರಕಾರದ ಮೂಲಕ ಉಚಿತ ಚಿಕಿತ್ಸೆ ನೀಡಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಕೆ.ಜಿ ಬಾಲಕೃಷ್ಣ, ನಿರ್ದೇಶಕರಾದ ವಿ.ವಿ ಮನೋಹರ್, ಮಿಟ್ಟು, ಉಣ್ಣಿಕೃಷ್ಣನ್, ಸಂಘಟನಾ ಸಂಚಾಲಕರಾದ ಟಿ.ಸಿ ಅಶೋಕ್, ಕಿಶೋರ್, ಕೆ ವಾಸು ಇದ್ದರು.