ಗೋಣಿಕೊಪ್ಪಲು, ಸೆ. 4 : ಗೋಣಿಕೊಪ್ಪ ದಸರಾ ಆಚರಣೆಯ ಆಯುಧಪೂಜಾ ಹಾಗೂ ವಿಜಯದಶಮಿಯಂದು ಮಳಿಗೆಗಳಿಗೆ ವಿದ್ಯುತ್ ದೀಪಾಲಂಕಾರ ಪೈಪೋಟಿಗೆ ಅವಕಾಶ ನೀಡಬೇಕು ಎಂದು ವರ್ತಕರು ಒತ್ತಾಯಿಸಿದ ಘಟನೆ ಇಲ್ಲಿನ ಕಾವೇರಿ ಮಹಿಳಾ ಸಮಾಜ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ದಸರಾ ವರ್ತಕರ ಸಭೆಯಲ್ಲಿ ಕೇಳಿ ಬಂತು

ದಶಕಗಳ ಹಿಂದೆ ಪಟ್ಟಣದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಅವಕಾಶ ನೀಡುವ ಮೂಲಕ ಪಟ್ಟಣ ಬೆಳಕಿನಿಂದ ಕಂಗೊಳಿಸುತ್ತಿದ್ದ ಇತಿಹಾಸ ಇಂದಿಗೂ ಕಲಾಭಿಮಾನಿ ಗಳ ಮನಸೆಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಅವಕಾಶ ನೀಡದ ಕಾವೇರಿ ದಸರಾ ಸಮಿತಿಯ ನಡೆ ವರ್ತಕರು ದಸರಾ ಆಚರಣೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ದೀಪಾಲಂಕಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು.

ವಿಜಯದಶಮಿಯಂದು ಪಟ್ಟಣಕ್ಕೆ ಸೇರುವ ರಸ್ತೆಗಳ ಬಹುದೂರದ ಅಂತರದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡುತ್ತಿದ್ದರಿಂದ ದಸರಾ ವೀಕ್ಷಣೆಗೆ ಕಲಾಭಿಮಾನಿಗಳ ಸಂಖ್ಯೆ ಕ್ಷೀಣಿಸುವಂತಾಗಿದೆ. ಪಟ್ಟಣದ ಸಮೀಪ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎಂದು ವರ್ತಕರು ಒತ್ತಾಯಿಸಿದರು.

ಹೊರ ಜಿಲ್ಲೆಯಿಂದ ಬರುವ ಪೊಲೀಸ್ ಸಿಬ್ಬಂದಿ ವರ್ತನೆ ಕಲಾಭಿಮಾನಿಗಳಿಗೆ ನೋವು ತರುವಂತಾಗಿರುತ್ತದೆ. ಇದನ್ನು ತಪ್ಪಿಸಲು ಜಿಲ್ಲೆಯ ಪೊಲೀಸರು ಹೆಚ್ಚು ಪಾಲ್ಗೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ತೇರು ಸಮಯ ಪಾಲನೆ ಮಾಡಲು ದಸರಾ ಸಮಿತಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ತೀರ್ಪುಗಾರರ ಆಯ್ಕೆ ಕೂಡ ಗುಣಮಟ್ಟದಿಂದ ಕೂಡಿರಬೇಕು. ಅವರು ಒತ್ತಡಕ್ಕೆ ಮಣಿಯದಂತೆ ಕ್ರಮಕೈಗೊಳ್ಳಬೇಕು. ವರ್ತಕರಿಂದ ಬಲತ್ಕಾರ ವಸೂಲಾತಿ ಕೂಡದು ಎಂದು ವರ್ತಕರು ಒತ್ತಾಯಿಸಿದರು.

ಪಟ್ಟಣದ ಮುಖ್ಯ ರಸ್ತೆ ದುರಸ್ತಿ ಶೀಘ್ರವಾಗಿ ಮಾಡಬೇಕು. ದಸರಾ ದಿನ ಮಾರಾಟ ಮಾಡುವ ತಿಂಡಿ ತಿನಿಸುಗಳ ಕಸವನ್ನು ಮಾರಾಟಗಾರರೇ ಸ್ವಚ್ಚಗೊಳಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ವರ್ತಕರ ಸಂಘದ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಮಾತನಾಡಿ, ವರ್ತಕರುಗಳಿಂದಲೇ ಗೋಣಿಕೊಪ್ಪ ದಸರಾ ಆರಂಭವಾಗಿದೆ. ಈ ಬಾರಿಯ ನೂತನ ಸಮಿತಿ ವರ್ತಕರ ಸಲಹೆ ಕೇಳಲು ನಡೆಸಿದ ಸಭೆ ದಸರಾ ಯಶಸ್ವಿಗೆ ಸಹಕಾರಿಯಾಗಲಿದೆ ಎಂದರು.

ಹಿರಿಯ ಸದಸ್ಯ ಎಂ ಜಿ ಮೋಹನ್ ಮಾತನಾಡಿ, ಸರ್ಕಾರದ ಅನುದಾನ ಸಿಗುವುದರಿಂದ ವರ್ತಕರಿಗೆ ಆರ್ಥಿಕ ಹೊರೆ ತಪ್ಪಿದಂತಾಗಿದೆ. ವರ್ತಕರು ಹೆಚ್ಚು ಪಾಲ್ಗೊಳ್ಳಲು ದಿನಸಿ, ಜ್ಯುವೆಲ್ಲರಿ, ಹೋಟೇಲ್ ಎಲ್ಲಾ ಅಂಗಡಿಗಳಿಗೂ ಪ್ರತ್ಯೇಕ ದೀಪಾಲಂಕಾರ ಪೈಪೋಟಿ ನಡೆಸುವುದು ಉತ್ತಮ ಎಂದರು. ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಕಾರ್ಯಾಧ್ಯಕ್ಷ ಬಿ ಎನ್ ಪ್ರಕಾಶ್, ಪ್ರ. ಕಾರ್ಯದರ್ಶಿ ಚೇಂದೀರ ಪ್ರಭಾವತಿ, ಖಜಾಂಜಿ ಧ್ಯಾನ್ ಸುಬ್ಬಯ್ಯ, ಚೇಂಬರ್ ಕಾರ್ಯದರ್ಶಿ ಟಿ ಪಿ ಕಾಶಿ ಉಪಸ್ಥಿತರಿದ್ದರು. ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ನವೀನ್ ಸ್ವಾಗತಿಸಿದರು. ವರ್ತಕರುಗಳಾದ ಶಿವಾಜಿ, ದಿಲಿಪ್, ಕಾಶಿ, ಸುರೇಶ್ ಇವರುಗಳು ಸಲಹೆಗಳನ್ನು ನೀಡಿದರು.