ಕುಶಾಲನಗರ, ಸೆ. 6: ಗುಂಡೂರಾವ್ ಬಡಾವಣೆಯ ನಿವೇಶನಗಳ ಹರಾಜು ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯಿತಿಯಿಂದ ಆಡಳಿತಾತ್ಮಕ ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಬಡಾವಣೆಯಲ್ಲಿ ಎಲ್ಲಾ ಮೂಲಭೂತ ವ್ಯವಸ್ಥೆ ಕಲ್ಪಿಸುವದರೊಂದಿಗೆ ಹರಾಜುದಾರರಿಗೆ ನಿವೇಶನ ನೋಂದಣಿ ಮಾಡಿ ಕೊಡುವ ಕಾರ್ಯ ಚಾಲನೆಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಪ್ರಬಾರ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ಅವರು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಖರೀದಿದಾರರು ಯಾವದೇ ಆತಂಕಪಡುವ ಅವಶ್ಯಕತೆಯಿರುವದಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ನಂಜುಂಡಸ್ವಾಮಿ ಮತ್ತು ಹೆಚ್.ಜೆ. ಕರಿಯಪ್ಪ ಅವರ ಪ್ರಶ್ನೆಗೆ ಸಭೆಯಲ್ಲಿ ಉತ್ತರಿಸಿದರು. ಕಾನೂನು ರೀತಿಯಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆದಿದ್ದು, ಹರಾಜು ಸಂದರ್ಭ ಕೆಲವರು ಗೊಂದಲ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಬಿಡ್ಡುದಾರರು ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದ ಅವರು, ಬಡಾವಣೆಗೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲು ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವದು ಎಂದು ತಿಳಿಸಿದ್ದಾರೆ.

ಸದಸ್ಯರ ಗಮನಕ್ಕೆ ಕೆಲವು ವಿಷಯಗಳು ಬರದಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಉಳಿದಂತೆ ಗುಂಡುರಾವ್ ಬಡಾವಣೆಯಲ್ಲಿ 21 ಎಕರೆ ಜಾಗವಿದ್ದು ಅದರ ಮಾರ್ಪಾಡು ಮಾಡುವ ಯೋಜನೆಗೆ ಸಭೆ ಅನುಮೋದನೆ ನೀಡುವಂತೆ ಶರವಣಕುಮಾರ್ ಕೋರಿದರು.

ಗುಂಡುರಾವ್ ಬಡಾವಣೆ ನಿವೇಶನಗಳ ಹರಾಜು ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಕೆ.ತಿಮ್ಮಪ್ಪ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಮರ್ಪಕ ಮಾಹಿತಿ ಒದಗಿಸಲಾಗುವದು ಎಂದು ಅಧ್ಯಕ್ಷರು ಭರವಸೆ ನೀಡಿದರು. ಮಾಜಿ ಅಧ್ಯಕ್ಷ ಎಂ.ಎಂ. ಚರಣ್ ಮಾತನಾಡಿ, ಎಲ್ಲಾ ಅನುಮೋದನೆ ದೊರಕಿದ ಹಿನ್ನೆಲೆಯಲ್ಲಿ ಸುಮಾರು 50 ನಿವೇಶನಗಳ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಅಂದಾಜು ರೂ 7.59 ಕೋಟಿ ವೆಚ್ಚದಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಕುಶಾಲನಗರ ಪಟ್ಟಣದ ಒಳಚರಂಡಿ ಕಾಮಗಾರಿ ಪರಿಶೀಲನೆಗೆ ನಿಯೋಗ ತೆರಳುವದು, ಯೋಗಾನಂದ ಬಡಾವಣೆಯ ಬಗ್ಗೆ ಚರ್ಚೆ ಹಾಗೂ ಹಿಂದಿನ ಸಭೆಯ ನಡಾವಳಿಗಳನ್ನು ಅಂಗೀಕರಿಸ ಲಾಯಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಡಿ. ಚಂದ್ರು, ಸದಸ್ಯರುಗಳಾದ ಲಲಿತಾ, ಸುರಯ್ಯಭಾನು, ಕವಿತಾ, ಪ್ರಮೋದ್ ಮುತ್ತಪ್ಪ, ಫಜಲುಲ್ಲಾ, ಮಧುಸೂದನ್, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಅಭಿಯಂತರ ಶ್ರೀಧರ್ ಇದ್ದರು.