ಮಡಿಕೇರಿ, ಸೆ. 5: ಹಿರಿಯ ಪತ್ರಕರ್ತೆ, ಲಂಕೇಶ್ ಪತ್ರಿಕೆಯ ಸಂಪಾದಕಿ, ಸಾಹಿತಿ,ವಿಚಾರವಾದಿಯಾಗಿರುವ ಗೌರಿ ಲಂಕೇಶ್ ಅವರನ್ನು ಆಗಂತುಕರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ತಮ್ಮ ಮನೆಯ ಎದುರು ನಿಂತಿದ್ದ ಸಂದರ್ಭ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇಂದು ಸಂಜೆ ಪತ್ರಿಕಾ ಕಾರ್ಯವನ್ನು ಮುಗಿಸಿ ಮನೆಗೆ ಬಂದಿದ್ದ ಸಂದರ್ಭ 8 ಗಂಟೆ ವೇಳೆಗೆ ಈ ಕೃತ್ಯ ನಡೆದಿದೆ. ಗೌರಿ ಅವರ ಹಣೆ, ಎದೆ, ಹೃದಯ ಭಾಗಗಳಿಗೆ ಗುಂಡು ತಗಲಿದೆ. ಮೂರು ಸುತ್ತಿನ ಗುಂಡು ಹಾರಿಸಲಾಗಿದ್ದು, ಗೌರಿ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆರೋಪಿಗಳು ಮನೆಯ ಮೇಲೆಯೂ ನಾಲ್ಕು ಸುತ್ತು ಗುಂಡು ಹಾರಿಸಿರುವದು ಪತ್ತೆಯಾಗಿದೆ.ರಾಜ್ಯದಲ್ಲಿ ಸಾಹಿತಿ ಕಲಬುರ್ಗಿ ಹತ್ಯೆ ಬಳಿಕ ಇದೀಗ ಇನ್ನೋರ್ವ ವಿಚಾರವಾದಿಯ ಹತ್ಯೆಯಾಗಿದ್ದು, ರಾಜ್ಯಾದ್ಯಂತ ಹತ್ಯೆಗೆ ಖಂಡನೆ ವ್ಯಕ್ತಗೊಳ್ಳುತ್ತಿದೆ. ಸ್ಥಳಕ್ಕೆ ರಾಜರಾಜೇಶ್ವರಿ ಪೊಲೀಸರು ದೌಡಾಯಿಸಿದ್ದಾರೆ.

ಸಂತಾಪ: ಹಿರಿಯ ಪತ್ರಕರ್ತೆ ಯನ್ನು ಹತ್ಯೆಗೈದಿರುವ ಪ್ರಕರಣವನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಖಂಡಿಸಿದ್ದು, ಸಂತಾಪ ವ್ಯಕ್ತಪಡಿಸಿದೆ.

ಗೌರಿ ಲಂಕೇಶ್ ಹತ್ಯೆಯನ್ನು ಕೊಡಗು ಪತ್ರಕರ್ತರ ವೇದಿಕೆ, ಕ.ಸಾ.ಪ. ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು ಖಂಡಿಸಿದ್ದಾರೆ. ಕಲ್ಬುರ್ಗಿ ಹತ್ಯಾಕಾಂಡದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿರುವ ಸರಕಾರದ ಆಡಳಿತದಲ್ಲಿ ಮತ್ತೋರ್ವ ಪತ್ರಕರ್ತೆ, ವಿಚಾರವಾದಿಯ ಹತ್ಯೆಯಾಗಿರುವದು ದುರಂತವೆಂದು ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್, ಪತ್ರಕರ್ತರ ವೇದಿಕೆ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಅಭಿಪ್ರಾಯಿಸಿದ್ದಾರೆ.