ಪೊನ್ನಂಪೇಟೆ, ಸೆ. 5: ಕೊಡಗಿನಲ್ಲಿ ಎಲ್ಲಾ ಧರ್ಮಿಯರು ಸೌಹಾದರ್Àತೆಯಿಂದ ಬದುಕುತ್ತಿರುವದನ್ನು ಸಹಿಸದ ಕೆಲವೇ ಕೆಲವು ಮತೀಯ ಕಿಡಿಗೇಡಿಗಳು ಏನನ್ನಾದರು ಮಾಡಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿ ಗಲಭೆ ನಡೆಸುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ನೆಟ್ಟುಮಾಡು ಶ್ರೀ ಭಗವತಿ ದೇವಾಲಯದ ದ್ವಾರದಲ್ಲಿ ದನದ ಕಾಲುಗಳನ್ನು ನೇತು ಹಾಕಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ), ಅಶಾಂತಿ ಸೃಷ್ಟಿಸಲು ಯತ್ನಿಸಿರುವ ಕಿಡಿಗೇಡಿಗಳನ್ನು ಕೂಡಲೆ ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಅವರು, ಈ ಕುಕೃತ್ಯ ಎಸಗಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಜಿಲ್ಲೆಯ ಜನತೆಗೆ ಸತ್ಯಾಂಶ ತಿಳಿಸುವದು ಪೊಲೀಸ್ ಇಲಾಖೆಯ ಹೊಣೆಗಾರಿಕೆಯಾಗಿದೆ ಎಂದರು. ಇಸ್ಲಾಂ ಧರ್ಮದ ನೈಜ ಅನುಯಾಯಿಗಳಾರು ಈ ಕೃತ್ಯ ಎಸಗಲು ಸಾಧ್ಯವಿಲ್ಲ. ಈ ರೀತಿಯ ಕೃತ್ಯವನ್ನು ಇಸ್ಲಾಂ ಎಂದಿಗೂ ಪ್ರೋತ್ಸಾಹಿಸುವದಿಲ್ಲ. ಅಲ್ಲದೇ ಧರ್ಮದ ದೃಷ್ಟಿಯಲ್ಲೂ ಇದು ಮಹಾ ಅಪರಾಧವಾಗಿದೆÀ. ಒಂದು ವೇಳೆ ಈ ಕೃತ್ಯ ನಡೆಸಿದವರು ಮುಸ್ಲಿಂ ಆಗಿದ್ದಲ್ಲಿ ಅವರು ಇಸ್ಲಾಂ ಧರ್ಮೀಯನಾಗಲು ಯಾವದೇ ಕಾರಣಕ್ಕೂ ಸಾಧ್ಯವಿಲ್ಲ. ಕೃತ್ಯ ಎಸಗಿರುವ ಆರೋಪಿಗಳು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಕಾನೂನಿನಲ್ಲಿ ಶಿಕ್ಷಿಸಬೇಕಿದೆ. ಅಲ್ಲದೇ ಈ ಮತೀಯ ಕಿಡಿಗೇಡಿಗಳನ್ನು ಜಿಲ್ಲೆಯಿಂದಲೇ ಶಾಶ್ವತವಾಗಿ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕಿದೆ.

ಈ ಬಗ್ಗೆ ಪೊಲೀಸ್ ಇಲಾಖೆ ಮುಂದೆ ಯಾವದೇ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿರುವ ದುದ್ದಿಯಂಡ ಹೆಚ್.ಸೂಫಿ ಅವರು, ಕಕ್ಕಬ್ಬೆಯ ಈ ಘಟನೆಯನ್ನು ಮೂಲವನ್ನಾಗಿಸಿ ಕೊಂಡು ಅಲ್ಲಲ್ಲಿ ಇಲ್ಲಸಲ್ಲದ ಮತ್ತು ಅನಗತ್ಯ ಹೇಳಿಕೆ ನೀಡುತ್ತಿರುವದು ಸರಿಯಲ್ಲ. ವ್ಯಾಪ್ತಿ ಮೀರಿದ ಹೇಳಿಕೆ ಮತ್ತು ಪ್ರಚೋದನಾ ಮಾತುಗಳು ಯಾರಿಗೂ ಶೋಭೆ ತರುವದಿಲ್ಲ. ಆದ್ದರಿಂದ ಎಲ್ಲರೂ ಪ್ರಜ್ಞಾವಂತಿಕೆಯನ್ನು ಮೆರೆದು ಜಿಲ್ಲೆಯ ಜನತೆಯ ಸಹೋದರತೆಯ ಬದುಕಿನ ಪರಂಪರೆಯನ್ನು ಎತ್ತಿ ಹಿಡಿಯುವಂತಾಗಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಡಾ. ಜೋಯಿಪೆರ ಎ. ಕುಂಞಬ್ದುಲ್ಲಾ, ಉಪಾಧ್ಯಕ್ಷರಾದ ಆಲೀರ ಎ. ಅಹಮ್ಮದ್ ಹಾಜಿ, ಜಂಟಿ ಕಾರ್ಯದರ್ಶಿ ಕರ್ತೊರೆರ ಕೆ. ಮುಸ್ತಫಾ, ಸಹಕಾರ್ಯದರ್ಶಿ ಮಂಡೇಂಡ ಎ. ಮೊಯ್ದು, ಕೆ.ಎಂ.ಎ. ಸದಸ್ಯತ್ವ ಅಭಿಯಾನದ ಉಪ ಸಮಿತಿ ಅಧ್ಯಕ್ಷ ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮಿ)್ಣ ಅವರು ಉಪಸ್ಥಿತರಿದ್ದರು.