ವೀರಾಜಪೇಟೆ: ಸೆ. 5: ವ್ಯವಸ್ಥಿತವಾಗಿ ಅನೇಕ ದಶಕಗಳಿಂದ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಗೌರಿಗಣೇಶೋತ್ಸವದ ವಿಸರ್ಜನೋತ್ಸವ ಅನಂತ ಪದ್ಮನಾಭ ವ್ರತÀದ ದಿನವಾದ ಇಂದು ರಾತ್ರಿ 21 ವಿದ್ಯುತ್ ಅಲಂಕೃತ ಮಂಟಪಗಳ ಸಾಮೂಹಿಕ ಮೆರವಣಿಗೆ ನಡೆದು ಬುಧವಾರ ಬೆಳಿಗ್ಗೆ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಪವಿತ್ರ ಗೌರಿಕೆರೆಯಲ್ಲಿ ಮೂರ್ತಿಗಳ ವಿಸರ್ಜನೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯದ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಶುಭ ಲಗ್ನದಲ್ಲಿ ಗಣಪತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ರಾತ್ರಿ 9-45 ಗಂಟೆಗೆ 21 ಮಂಟಪಗಳ ಪೈಕಿ ಪ್ರಥಮವಾಗಿ ಮೆರವಣಿಗೆಗೆ ಚಾಲನೆ ನೀಡಲಾಯಿತು.ಮೆರವಣಿಗೆಗೆ ಮುನ್ನ ಸರ್ವ ವಿಘ್ನನಾಶಕ ಗಣೇಶನಿಗೆ ದೇವಾಲಯದ ಆಡಳಿತ ಹಾಗೂ ಭಕ್ತಾದಿಗಳಿಂದ ಇಡುಗಾಯಿಯ ಮಹಾಪೂರವೇ ಹರಿಯಿತು. ಇಡುಗಾಯಿ ಹಾಕುವ ಭಕ್ತಾದಿಗಳನ್ನು ಪೊಲೀಸರು ಹರ ಸಾಹಸದಿಂದ ನಿಯಂತ್ರಿಸಬೇಕಾಯಿತು. ರಾತ್ರಿ 9-15ಕ್ಕೆ ದೇವಾಲಯದ ಮುಂದೆ ನಡೆದ ಸಿಡಿಮದ್ದು ಪ್ರದರ್ಶನ ಹಾಗೂ ವಿವಿಧ ಕಲಾ ತಂಡಗಳ ಮನರಂಜನೆ ವೀಕ್ಷಕರನ್ನು ಆಕರ್ಷಿಸಿತು.

ಮೆರವಣಿಗೆಯಲ್ಲಿ ಎರಡನೇ ಸಾಲಿನಲ್ಲಿದ್ದ ಇಲ್ಲಿನ ಜೈನರ ಬೀದಿಯ ಗೌರಿ ಗಣೇಶ ಉತ್ಸವ ಸಮಿತಿಯಿಂದ ರಾತ್ರಿ 8-30ಗಂಟೆಗೆ ಸಿಡಿಮದ್ದು ಪ್ರದರ್ಶನ ಹಾಗೂ ಕೀಲು ಕುದುರೆ ಕರಗ ಕುಣಿತ, ಅನಾರ್ಕಲಿ ಇತರ ಕಲಾ ತಂಡಗಳ ಮನರಂಜನೆ ಭಕ್ತಾದಿಗಳನ್ನು ವಿಶೇಷವಾಗಿ ರಂಜಿಸಿತು.

ಗಣಪತಿ ದೇವಾಲಯದ ಮಂಟಪ ಬಸವೇಶ್ವರ ದೇವಾಲಯವನ್ನು

(ಮೊದಲ ಪುಟದಿಂದ) ತಲುಪುತ್ತಲೇ ಬಸವೇಶ್ವರ ದೇವಾಲಯದ ಮಂಟಪ ಮೆರವಣಿಗೆಯಲ್ಲಿ ಮುಂದುವರೆಯಿತು. ಇದಾದ ನಂತರ ಕಾವೇರಿ ಗಣೇಶೋತ್ಸವ ಸಮಿತಿ ಮಂಟಪ ನಂತರ ಸಂಖ್ಯೆ ಹಾಗೂ ಸರದಿ ಪ್ರಕಾರದ ವಿವಿಧೆಡೆಗಳಿಂದ ಬಂದ ಮಂಟಪಗಳು ಸಾಮೂಹಿಕವಾಗಿ ಮೆರವಣಿಗೆಯಲ್ಲಿ ಸಾಗಿದವು.

ಮೊದಲ ಸರದಿಯ ಮಂಟಪಗಳು ತೆಲುಗರ ಬೀದಿಯಿಂದ ಸಿದ್ದಾಪುರ ರಸ್ತೆಯ ತಿರುವನ್ನು ತಲುಪಿ ಹಿಂದಿರುಗುತ್ತಲೇ ಗಣಪತಿ ದೇವಾಲಯದ ಮಂಟಪದ ಮೊದಲ ಸರದಿಯಲ್ಲಿ ಇತರ ಮಂಟಪಗಳು ಪೊಲೀಸ್ ಇಲಾಖೆಯಿಂದ ನೀಡಿದ ಸರದಿ ಸಂಖ್ಯೆಗಳ ಪ್ರಕಾರ ತೆಲುಗರ ಬೀದಿ,ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮುಖ್ಯ ಬೀದಿಯ ಮಾರ್ಗವಾಗಿ ಖಾಸಗಿ ಬಸ್ಸು ನಿಲ್ದಾಣದ ಬಳಿಯ ಗೌರಿಕೆರೆಯ ಬಳಿಗೆ ತೆರಳಿದವು.

ಈ ಬಾರಿ 21 ವಿದ್ಯುತ್ ಅಲಂಕೃತ ಮಂಟಪಗಳ ಸಾಮೂಹಿಕ ವರ್ಣರಂಜಿತ ಮೆರವಣಿಗೆಯನ್ನು ನೋಡಲು ಮುಖ್ಯ ಬೀದಿಗಳ ಎರಡು ಬದಿಗಳಲ್ಲಿ ವೀಕ್ಷಕರು ಕಿಕ್ಕಿರಿದು ನೆರೆದಿದ್ದರು. ಮಳೆಯ ಆತಂಕದಿಂದ ಉತ್ಸವ ಸಮಿತಿ ನಿರೀಕ್ಷಿಸಿದಷ್ಟು ಜನ ಸಂಖ್ಯೆ ಕಡಿಮೆ ಇತ್ತು. ಮೆರವಣಿಗೆಯಲ್ಲಿ ಕೆಲವು ಮಂಟಪಗಳ ಡಿ.ಜೆ.ಕುಣಿತದ ಸಂಗೀತದ ಶಬ್ದ ಕಿವಿ ಗಡಚಿಕ್ಕುವಂತಿತ್ತು.

ಇಂದು ಅಪರಾಹ್ನ 3ಗಂಟೆಯಿಂದ 6ಗಂಟೆಗೆ ಬಿದ್ದ ಭಾರೀ ಮಳೆಯಿಂದಾಗಿ ಉತ್ಸವದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಮೆರವಣಿಗೆಗೆ ಅಡಚಣೆಯಾಗುವದೆಂಬ ನಿರೀಕ್ಷೆಯಲ್ಲಿ ಆತಂಕಗೊಂಡಿದ್ದರು. ಆದರೆ ಮಳೆ ರಾತ್ರಿ 7ಗಂಟೆ ವೇಳೆಗೆ ಕಡಿಮೆಯಾಗಿ ಜನರ ಸಂಚಾರ ಮುಕ್ತಗೊಂಡಿತು.

ಗೌರಿ ಗಣೇಶನ ಬಂದೋಬಸ್ತ್‍ನಲ್ಲಿ ಅಗ್ನಿ ಶಾಮಕ ದಳ, ಮಡಿಕೇರಿಯ ವಿಧ್ವಂಶಕ ಕೃತ್ಯಗಳ ತಪಾಸಣಾ ಘಟಕ, ಬಾಂಬ್ ನಿಷ್ಕ್ರಿಯ ದಳ. ಮಹಿಳಾ ಪೊಲೀಸರು, ಹೋಮ್‍ಗಾರ್ಡ್‍ಗಳು, ಹೊರ ಜಿಲ್ಲೆಯಿಂದ ಪೊಲೀಸ್ ಅಧಿಕಾರಿಗಳು, ಪೊಲೀಸರು, ಶಸಸ್ತ್ರ ಪಡೆಯ ಎರಡು ತುಕಡಿಗಳು, ಕೆ.ಎಸ್.ಆರ್.ಪಿ.ಯ ಎರಡು ಬಸ್ಸುಗಳು ಅಪಾರ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಗೌರಿಗಣೇಶೋತ್ಸವದ ಅಂಗವಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ವೀಕ್ಷಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಪವಿತ್ರ ಗೌರಿಕೆರೆಗೆ ಬಿದ್ದು ಒಬ್ಬ ಅಪರಿಚಿತ ಸಾವನ್ನಪ್ಪಿ ಮೂರು ದಿನಗಳಾಗಿದ್ದರಿಂದ ಇಂದು ಬೆಳಿಗ್ಗೆ 9ಗಂಟೆಗೆ ಅಧ್ಯಕ್ಷ ಇ.ಸಿ.ಜೀವನ್ ಅವರ ನೇತೃತ್ವದಲ್ಲಿ ಪುಣ್ಯಾರ್ಚಾನೆ ಹಾಗೂ ಶುದ್ಧ ಕಳಸ ಪೂಜೆ ವ್ಯವಸ್ಥೆಗೊಳಿಸಿ ಗೌರಿಕೆರೆಯನ್ನು ವಿದ್ಯುತ್ ದೀಪಾಲಂಕಾರದೊಂದಿಗೆ ಶೃಂಗರಿಸಲಾಗಿತ್ತು.