ಅದೆಷ್ಟೊ ಕೊಡಗಿನ ವೀರ ಸೇನಾನಿಗಳು ಭಾರತೀಯ ಸೇನೆಯಲ್ಲಿ ಸೇರಿ ದೇಶಾಭಿಮಾನದಿಂದ ಶತ್ರು ಪಡೆಯೊಂದಿಗೆ ಹೋರಾಡಿ ವೀರ ಮರಣವನಪ್ಪಿ ಇತಿಹಾಸ ಸೇರಿ ಹೋಗಿದ್ದಾರೆ. ಇಂತಹ ಭಾರತೀಯ ಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಹುದ್ದೆಯನ್ನು ಅಲಂಕರಿಸಿ ತನ್ನ ಜೀವದ ಹಂಗನ್ನೆಲ್ಲ ತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿ ಮೆರೆದ ವೀರಸೇನಾನಿ ಕೊಡಗಿನ ಅಜ್ಜಮಾಡ ಮನೆತನದ ದೇವಯ್ಯ ವೀರ ಮರಣವನಪ್ಪಿ ಇಂದಿಗೆ 52 ವರ್ಷಗಳೇ ಕಳೆದು ಹೋದವು.

1965ರಲ್ಲಿ ಭಾರತ-ಪಾಕ್ ಯುದ್ಧದ ಸಂದರ್ಭ ಫೈಟರ್ ಪೈಲೆಟ್ ಅಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರಿಗೆ ಪಾಕ್ ಭದ್ರ ಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ತಮ್ಮ ದಾಳಿನಡೆಸುವ ಜವಾಬ್ದಾರಿ ವಹಿಸಲಾಯಿತು. ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿಭಾಯಿಸುವ ಸಲುವಾಗಿ ಹೊರಟ ದೇವಯ್ಯ ತಂಡ ಶತ್ರುಗಳ ವಾಯುನೆಲೆಯನ್ನು ಧ್ವಂಸಗೊಳಿಸುವ ಮೂಲಕ ಗುರಿ ಸಾಧಿಸಿ ಮರಳುತಿತ್ತು. ದೇವಯ್ಯಅವರು ತಮ್ಮ ತಂಡಕ್ಕೆ ಬೆಂಗಾವಲಾಗಿ ಸುರಕ್ಷಿತವಾಗಿ ಹಿಂತಿರುಗುತಿದ್ದಂತೆ ದಿಡೀರನೆ ಹಿಂಬಾಲಿಸಿದ ಶತ್ರು ವಿಮಾನದೊಂದಿಗೆ ಮತ್ತೆ ಹೋರಾಟ ನಡೆಸಬೇಕಾಗಿತ್ತು.

ಎದೆಗುಂದದ ದೇವಯ್ಯ ಪ್ರಾಣದ ಹಂಗುತೊರೆದು ತನ್ನದೇ ಆದ ವಿಮಾನದ ಹೋರಾಟದ ಶೈಲಿಯಲ್ಲಿ ಶತ್ರುಗಳ ಸೂಪರ್‍ಸಾನಿಕ್ ವಿಮಾನವನ್ನು ಹೊಡೆದು ಉರುಳಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಸಾಹಸದ ಒಂದು ದಾಖಲೆ ನಿರ್ಮಿಸಿದರು. ಕಾಳಗದ ಕೊನೆಯಲ್ಲಿ ದೇವಯ್ಯ ತಮ್ಮ ದೇಶಕಾಗಿ ಪ್ರಾಣತ್ಯಾಗ ಮಾಡಬೇಕಾಗಿ ಬಂತು. 1965ರ ಸೆಪ್ಟಂಬರ್ 7ರಂದು ನಡೆದ ಈ ಘಟನೆಯಲ್ಲಿ ದೇವಯ್ಯ ತನ್ನ ಸೇನಾ ಜೀವನದಲ್ಲಿ ಸಾಹಸ ಮೆರೆದು ತನ್ನ ಪ್ರಾಣವನ್ನು ದೇಶಕಾಗಿ ಅರ್ಪಿಸಿದರು.

ಕೊಡಗಿನ ಶ್ರೀಮಂಗಲದ ಕುರ್ಚಿ ಗ್ರಾಮದ ಅಜ್ಜಮಾಡ ಬೋಪಯ್ಯ-ನೀಲಮ್ಮ ದಂಪತಿಗಳ ಪುತ್ರ ದೇವಯ್ಯ 1954ರಲ್ಲಿ ತನ್ನ 22ರ ಹರೆಯದಲ್ಲಿ ಸೇನೆಗೆ ಸೇರಿದರು. ಅವರ 11 ವರ್ಷಗಳ ಸೇನಾ ಜೀವನದಲ್ಲಿ ದೇಶ ಸೇವೆಯಲ್ಲಿನ ಅಸಾಮಾನ್ಯ ಸಾಹಸ, ಎದೆಗಾರಿಕೆ ತ್ಯಾಗ ಬಲಿದಾನಗಳನ್ನು ಪರಿಗಣಿಸಿ ಭಾರತ ಸರ್ಕಾರ ಮರಣೋತ್ತರವಾಗಿ ದೇವಯ್ಯ ಅವರಿಗೆ 1988ರಲ್ಲಿ ಮಹಾವೀರಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಆರ್ ವೆಂಕಟರಾಮನ್‍ರವರು ದಿ. ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ (ತವರು ಮನೆ ಕೀತಿಯಂಡ, ಸಿದ್ದಾಪುರ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ದಿ. ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ತಮ್ಮ ಇಬ್ಬರು ಪುತ್ರಿಯರೊಂದಿಗೆ ದೇಶಕ್ಕಾಗಿ ಪ್ರ್ರಾಣತೆತ್ತ ತನ್ನ ಪತ್ನಿಯ ನೆನಪಿನೊಂದಿಗೆ ಬದುಕುತ್ತಿದ್ದಾರೆ.

ಸ್ಕ್ವಾಡ್ರನ್ ಲೀಡರ್ ದಿ. ಅಜ್ಜಮಾಡ ದೇವಯ್ಯ ನೆನಪು ಅಜರಾಮರವಾಗಿರಲೆಂದು ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ವೃತ್ತÀಕ್ಕೆ ಅಜ್ಜಮಾಡ ದೇವಯ್ಯ ವ್ರತ್ತವೆಂದು ನಾಮಕರಣ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಮಡಿಕೇರಿಯ ಕೊಡವಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರು ಸೇರಿ ಈ ವ್ರತ್ತದಲ್ಲಿ ದಿ. ಅಜ್ಜಮಾಡ ದೇವಯ್ಯ ಅವರ ಭಾವಚಿತ್ರವನ್ನಿಟ್ಟು ಸೆಪ್ಟಂಬರ್ 7 ರಂದು ಸ್ಮರಣೆ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇವರ ನೆನೆಪು ಶಾಶ್ವತವಾಗಿ ಉಳಿಯಲೆಂದು ದೇವಯ್ಯ ವ್ರತ್ತದಲ್ಲೆ ಕಂಚಿನ ಪುತ್ತಳಿ ನಿರ್ಮಾಣ ಮಾಡಬೇಕೆಂದು ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬ ತೀರ್ಮಾನಿಸಿ ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧ ಪಟ್ಟ ಇಲಾಖೆ ಗಳಿಗೆಲ್ಲ ಈಗಾಗಲೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾಡಳಿತದ ಪೂರ್ವಾಅನುಮತಿ ದೊರೆತ್ತಿದೆ ಸಂಪೂರ್ಣ ಅನುಮತಿ ದೊರೆತ ಕೂಡಲೆ ಸ್ಕ್ವಾ. ಲೀ. ದಿ. ಅಜ್ಜಮಾಡ ದೇವಯ್ಯ ಅವರ ಕಂಚಿನ ಪುತ್ತಳಿ ಪ್ರತಿಷ್ಠಾಪನೆಗೊಳ್ಳಲಿದೆ.

“ತನ್ನ ದೇಶಕ್ಕಾಗಿ ಪ್ರಾಣವನ್ನೆ ಒತ್ತೆ ಇಟ್ಟು ಹೋರಾಡಿ ಮಡಿದವರನ್ನು ಸದಾ ನೆನೆಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಆದರಿಂದ ನಾವು ಪ್ರತೀ ವರ್ಷ ಸೆಪ್ಟಂಬರ್ 7 ರಂದು ಸ್ಕ್ವಾಡ್ರನ್ ಲೀಡರ್ ದೇವಯ್ಯನವರ ಸ್ಮರಣೆ ಕಾರ್ಯಕ್ರಮವನ್ನು ಆಚರಿಸುತಿದ್ದೇವೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಹೇಳಿದ್ದಾರೆ.

ಈ ಬಾರಿ ಗಣ್ಯರು, ನಿವೃತ್ತ ಯೋಧರು, ದೇಶಾಭಿಮಾನಿಗಳು ಅಜ್ಜಮಾಡ “ಸ್ಕ್ವಾಡ್ರನ್ ಲೀಡರ್ ದೇವಯ್ಯನವರ ಸ್ಮರಣೆ” ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಕೊಡಗಿನ ಅಪ್ರತಿಮ ವೀರಯೋಧನ ಸ್ಮರಣೆ ಮಾಡಲಿದ್ದಾರೆ. ಸ್ಕ್ವಾಡನ್ ಲೀಡರ್ ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರದ ಅನುಮತಿಗಾಗಿ ಕೊಡವ ಮಕ್ಕಡ ಕೂಟ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ.

? ಪುತ್ತರಿರ ಕರುಣ್ ಕಾಳಯ್ಯ

ಕಾರ್ಯದರ್ಶಿ, ಕೊಡವ ಮಕ್ಕಡ ಕೂಟ.