ಮಡಿಕೇರಿ, ಸೆ. 5: ಇತ್ತೀಚೆಗೆ ಸಿದ್ದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಕಂಠಿ ಕಾರ್ಯಪ್ಪ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ಘಟಕ, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷÀ ಹನೀಫ್ ಸಂಪಾಜೆ, ಒಬ್ಬ ಜನಪ್ರತಿನಿಧಿಯಾಗಿದ್ದುಕೊಂಡು ಭಾರತದ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡದೆ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಕಂಠಿ ಕಾರ್ಯಪ್ಪ ಸಮಾಜದಲ್ಲಿ ಭಯದ ವಾತಾವರಣ ಮೂಡಿಸಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಭಾಷಣದ ಸಂದರ್ಭ ಸ್ಥಳದಲ್ಲಿದ್ದ ಪೊಲೀಸರು ವೀಡಿಯೋ ಚಿತ್ರೀಕರಣ ಮಾಡಿ ಕೊಂಡಿದ್ದರೂ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದ್ದು, ಕಂಠಿ ಕಾರ್ಯಪ್ಪ ಅವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕೆಂದು ಹನೀಫ್ ಒತ್ತಾಯಿಸಿದರು.

ಗ್ರಾ.ಪಂ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕೆಂದ ಅವರು ಮುಂದಿನ ಎರಡು ದಿನಗಳೊಳಗೆ ಬಂಧಿಸದಿದ್ದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವದಾಗಿ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ಮಾತನಾಡಿ ಶಾಂತಿ, ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿರುವ ಹಿಂದೂ ಸಮುದಾಯಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಕಂಠಿ ಕಾರ್ಯಪ್ಪ ಭಾಷಣ ಮಾಡಿದ್ದಾರೆ. ಅಲ್ಲದೆ ದಕ್ಷಿಣ ಕನ್ನಡ ಮಾದರಿಯಲ್ಲಿ ಅಶಾಂತಿಯನ್ನು ಮೂಡಿಸಲು ಕೆಲವರು ಯತ್ನಿಸುತ್ತಿ ದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅದ್ರಮಾನ್, ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶರ್ಫುದ್ದೀನ್, ಕಾರ್ಯದರ್ಶಿ ಮುನೀರ್ ಹಾಗೂ ಅಯ್ಯಂಗೇರಿ ವಲಯ ಕಾಂಗ್ರೆಸ್‍ನ ಪ್ರಮುಖರಾದ ಇಸ್ಮಾಯಿಲ್ ಉಪಸ್ಥಿತರಿದ್ದರು.