ಮಡಿಕೇರಿ, ಸೆ. 6: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಕೈಗೊಂಡು ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರನ್ನು ಧೀರ್ಘ ರಜೆಯಲ್ಲಿ ಕಳುಹಿಸಲಾಗಿತ್ತು.ಕಳೆದ ಕೆಲವು ತಿಂಗಳ ಹಿಂದೆ ಕ್ಯಾಂಪಸ್ ಆಯ್ಕೆಯಲ್ಲಿ ಗಣೇಶ್ ಶೆಟ್ಟಿ ಎಂಬಾತ ವಿದ್ಯಾರ್ಥಿನಿಯರಿಗೆ ವಂಚಿಸಿದ ಪ್ರಕರಣ ಸಂಬಂಧ ಪ್ರಾಂಶುಪಾಲರ ಜವಾಬ್ದಾರಿಕೆಯ ವೈಫಲ್ಯವೆಂದು ಸಿಂಡಿಕೇಟ್ ಆರೋಪಿಸಿ ಈ ನಿರ್ಧಾರ ಕೈಗೊಂಡಿತ್ತು.ಆದರೆ ಇದೀಗ ಕಾನೂನಾತ್ಮಕ ಹೋರಾಟಕ್ಕಿಳಿದಿರುವ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಅವರು ರಾಜ್ಯ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು, ಅವರ ಪರ ಅರ್ಜಿ ಸಲ್ಲಿಸಿದ್ದ ವಕೀಲ ಧ್ಯಾನ್ ಚಿಣ್ಣಪ್ಪ ಅವರು, ಈ ರೀತಿ ಧೀರ್ಘ ರಜೆಗೆ ತೆರಳುವಂತೆ ಆದೇಶಿಸಲು ವಿವಿ ಸಿಂಡಿಕೇಟ್‍ಗೆ ಅಧಿಕಾರವಿಲ್ಲವೆಂದು ನ್ಯಾಯಾಲಯದಲ್ಲಿ ವಾದಿಸಿದ್ದರು.
(ಮೊದಲ ಪುಟದಿಂದ) ನ್ಯಾಯಾಧೀಶ ಬಿ. ವೀರಪ್ಪ ಅವರು ಈ ಬಗ್ಗೆ ತಾ. 5ರಂದು ಮಧ್ಯಂತರ ಆದೇಶವೊಂದನ್ನು ಹೊರಡಿಸಿ ದ್ದಾರೆ. ಈ ಆದೇಶದ ಅನ್ವಯ ವಿ.ವಿ.ಯಿಂದ ಧೀರ್ಘ ರಜೆಗೆ ತೆರಳಲು ಪ್ರಾಂಶುಪಾಲರಿಗೆ ನೀಡಿದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದಿನಿಂದ ಪ್ರಾಂಶುಪಾಲರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ವಿ.ವಿ.ಯು ಈ ಹಿಂದೆ ಸಹಾಯಕ ಪ್ರಾಧ್ಯಾಪಕ ಪಿ.ಡಿ. ತಿಮ್ಮಯ್ಯ ಅವರನ್ನು ಹಂಗಾಮಿಯಾಗಿ ಪ್ರಾಂಶುಪಾಲ ಹುದ್ದೆಗೆ ನೇಮಕ ಮಾಡಿತ್ತು. ವಿ.ವಿ. ನೀಡಿದ ಆದೇಶದಂತೆ ತಾನು ಕರ್ತವ್ಯ ನಿರ್ವಹಿಸುತ್ತಿದ್ದು, ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿಲ್ಲ. ವಿ.ವಿ. ಆಡಳಿತ ಮಂಡಳಿ ನೀಡುವ ನಿರ್ದೇಶನಕ್ಕೆ ತಾನು ಬಾಧ್ಯನಾಗಿದ್ದೇನೆ ಎಂದು ತಿಮ್ಮಯ್ಯ ಅವರು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ.