ಕುಶಾಲನಗರ, ಸೆ. 6 : ಕುಶಾಲನಗರವನ್ನು ಕೇಂದ್ರವನ್ನಾಗಿಸಿ ಕಾವೇರಿ ತಾಲೂಕು ರಚಿಸಬೇಕೆನ್ನುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸುವ ಮೂಲಕ ನಮ್ಮ ಹಕ್ಕನ್ನು ಪಡೆದೇ ತೀರಲಾಗುವದು ಎಂದು ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ಹೇಳಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಹೋರಾಟಗಳ ಮೂಲಕ ಸರಕಾರದ ಗಮನಕ್ಕೆ ತರಲಾದರೂ ಕೂಡ ಇದುವರೆಗೆ ಕಾವೇರಿ ತಾಲೂಕು ರಚನೆ ಕನಸಾಗಿಯೇ ಉಳಿಯುವದ ರೊಂದಿಗೆ ಹೋರಾಟಗಳು ನಿಫಲಗೊಳ್ಳುತ್ತಿದೆ. ಸರಕಾರ ಈಗಾಗಲೆ 49 ತಾಲೂಕುಗಳನ್ನು ರಚಿಸುವ ತೀರ್ಮಾನ ಕೈಗೊಂಡಿದ್ದು ಕುಶಾಲನಗರವನ್ನು 50ನೇ ತಾಲೂಕಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕೆಂಬ ಮನವಿಯನ್ನು ಪುರಸ್ಕರಿಸದಿರುವ ನಿಟ್ಟಿನಲ್ಲಿ ಮತ್ತೆ ಹೋರಾಟ ಹಾದಿ ಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಪ್ರಥಮ ಹಂತದಲ್ಲಿ ಶಿರಂಗಾಲ ವ್ಯಾಪ್ತಿಯಲ್ಲಿ ಸಮಿತಿ ರಚಿಸಲಾಗಿದೆ. ಮುಂದಿನ 3 ದಿನಗಳಲ್ಲಿ ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು, ಅಳುವಾರ, ಸಿದ್ದಲಿಂಗಪುರ, ಕುಶಾಲನಗರ, ಗುಡ್ಡೆಹೊಸೂರು, 7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುವದು ಎಂದು ಶಶಿಧರ್ ತಿಳಿಸಿದರು.

ಗೋಷ್ಠಿಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಪ್ರಬಾರ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಕುಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ಖಾದರ್, ಸಮಿತಿ ಪ್ರಮುಖರಾದ ಎನ್.ಕೆ. ಮೋಹನ್‍ಕುಮಾರ್, ನಾರಾಯಣ, ಜಿ.ಎಲ್.ನಾಗರಾಜ್, ವಿ.ಎಸ್. ಆನಂದಕುಮಾರ್, ದೇವರಾಜ್, ಅಮೃತ್‍ರಾಜ್ ಇದ್ದರು.