ಸಿದ್ದಾಪುರ, ಸೆ. 5 : ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿ.ಜೆ.ಪಿ. ಗೋವಿನ ಹೆಸರಿನಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಯತ್ನ ಮಾಡುತ್ತಿದೆ ಎಂದು ಸಿ.ಪಿ.ಐ.(ಎಂ) ಮುಖಂಡ ಎನ್.ಡಿ.ಕುಟ್ಟಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಗೋಮಾಂಸದ ಹೆಸರಿನಲ್ಲಿ ಅಮಾಯಕ ಮುಸಲ್ಮಾನರ ಮೇಲೆ ವಿನಾ ಕಾರಣ ಹಲ್ಲೆ ನಡೆಸುತ್ತಿರುವದು ಸರಿಯಾದ ಕ್ರಮವಲ್ಲ. ಇತ್ತೀಚೆಗೆ ಸಿದ್ದಾಪುರದಲ್ಲಿ ಹಿಂದೂಪರ ಸಂಘಟನೆಗಳು ಕಕ್ಕಬೆಯ ಘಟನೆಗೆ ಸಂಬಂಧಿಸಿ ನಡೆಸಿದ ಪ್ರತಿಭಟನೆಯ ಸಂದÀರ್ಭ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಪ್ರಚೋದನಾಕಾರಿ ಭಾಷಣ ಮಾಡಿ ಕೋಮು ಸೌಹಾರ್ದತೆಯನ್ನು ಕೆಡಿಸಲು ಯತ್ನಿಸಿರುವದು ಖಂಡನೀಯವಾಗಿದ್ದು, ಇವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಿ.ಪಿ.ಐ. (ಎಂ) ಮುಖಂಡ ವೈಜು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿ ಜಾರಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮವನ್ನು ಕೂಡ ಕಸ್ತೂರಿರಂಗನ್ ಗೆ ಸೇರ್ಪಡೆಗೊಳಿಸಲಾಗಿದ್ದು, ಈ ಬಗ್ಗೆ ಚಕಾರವೆತ್ತದ ಬಿ.ಜೆ.ಪಿ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ ಗೋವಿನ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಸಿ.ಪಿ.ಐ(ಎಂ) ಪದಾಧಿಕಾರಿಗಳಾದ ಶಾಲಿ ಫೌಲೋಸ್, ಹಂಸ, ಮಂಜು ಹಾಜರಿದ್ದರು.