ನವದೆಹಲಿ, ಸೆ. 5: ಡಿವೈಎಸ್‍ಪಿ ಎಂ.ಕೆ. ಗಣಪತಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಮಂಗಳವಾರ ಮಧ್ಯಾಹ್ನದ ವೇಳೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಎಂ.ಕೆ. ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಸಹೋದರ ಮಾಚಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ಆದೇಶ ಹೊರಡಿಸಿದೆ. ಈ ಹಿಂದೆ ಸಿಬಿಐ ತನಿಖೆಗೆ ಒಪ್ಪಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಸಿಬಿಐ ತನಿಖೆ ಜತೆಗೆ ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ಅವರ ವಿಚಾರಣೆ ನಡೆಸಿ ಮೂರು ತಿಂಗಳಿನೊಳಗೆ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಯು ಲಲಿತ್, ಗೊಯೆಲ್ ಅವರಿದ್ದ ನ್ಯಾಯಪೀಠ ನಿರ್ದೇಶಿಸಿದೆ.ಮಡಿಕೇರಿಯ ಲಾಡ್ಜ್‍ನಲ್ಲಿ (ರೂಮ್ ನಂಬರ್ 315) ಕಳೆದ ಜುಲೈ 7 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವದಕ್ಕೂ ಮುನ್ನ ಗಣಪತಿ ತಮ್ಮ ಜೀವಕ್ಕೆ ಯಾವದೇ ರೀತಿಯ ತೊಂದರೆಯಾದರೆ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಮತ್ತು ಎ.ಎಂ. ಪ್ರಸಾದ್ ಅವರೇ ಕಾರಣವೆಂದು ಆರೋಪ ಮಾಡಿದ್ದರು. ವೀಡಿಯೋ ಸಾಕ್ಷ್ಯವಿದ್ದರೂ ಯಾವದೇ ಕ್ರಮ ಜರುಗಿಸುವಲ್ಲಿ ಕರ್ನಾಟಕ ಸರ್ಕಾರ, ತನಿಖಾ ತಂಡ ವಿಫಲವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಎಂ.ಕೆ. ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಸಹೋದರ ಎಂ.ಕೆ. ಮಾಚಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದೆ.

ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಜಾರ್ಜ್, ಪ್ರಣಬ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಮೂವರಿಗೂ ಕ್ಲೀನ್ ಚಿಟ್ ನೀಡಿ, ಬಿ ರಿಪೋರ್ಟ್ ಸಲ್ಲಿಸಿದೆ. ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡ ಬಳಿಕ, ಗಣಪತಿ ಅವರ ಸಹೋದರ ಮಾಚಯ್ಯ, ಸಹೋದರಿ ಬಬಿತಾ, ತಂದೆ ಕುಶಾಲಪ್ಪ ಎಲ್ಲರಿಗೂ ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕಿದ್ದರು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರವಾದ ಲೋಪಗಳಾಗಿದ್ದು, ಸಿಐಡಿ ತನಿಖೆಯಲ್ಲಿ ಹಲವಾರು ಅಂಶಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ ಸುದ್ದಿ ವಾಹಿತಿಗಳು ವರದಿ ಮಾಡಿದ್ದವು. ಗಣಪತಿ ಬಳಸುತ್ತಿದ್ದ ಪೆನ್‍ಡ್ರೈವ್, ಮೊಬೈಲ್ ಫೋನ್‍ಗಳ ಮಾಹಿತಿ ಅಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವದಕ್ಕೂ ಮುನ್ನ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು. ಈ ಅಂಶಗಳನ್ನೆಲ್ಲ ಪರಿಶೀಲಿಸಿದ ನ್ಯಾಯಾಲಯ ಸಿಐಡಿ ತನಿಖೆ ಸರಿಯಿಲ್ಲ ವೆಂದು ಅಭಿಪ್ರಾಯಪಟ್ಟಿದೆಯಲ್ಲದೆ, ಸಿಬಿಐಗೆ

(ಮೊದಲ ಪುಟದಿಂದ) ವಹಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.

ಆದೇಶ ಸಿಕ್ಕಿಲ್ಲ

ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನ್ಯಾಯಾಲಯದ ಆದೇಶದ ಪ್ರತಿ ಇನ್ನೂ ಕೈ ಸೇರಿಲ್ಲ, ಆದೇಶದಲ್ಲಿ ಬಿ. ಶೀಟ್ ವರದಿ ರದ್ದಾಗಿದೆಯೋ ಅಥವಾ ಮರು ತನಿಖೆಗೆ ಆದೇಶಿಸಲಾಗಿದೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ, ವರದಿ ಕೈ ಸೇರಿದ ಬಳಿಕ ಪ್ರತಿಕ್ರಿಯಿಸುವದಾಗಿ ಹೇಳಿದ್ದಾರೆ.

ರಾಜೀನಾಮೆ ನೀಡಲ್ಲ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ತಂಡ ಬಿ ರಿಪೋರ್ಟ್ ನೀಡಿದೆ. ಆದರೂ ಸರ್ಮೋಚ್ಛ ನ್ಯಾಯಾಲಯ ಸಿಬಿಐಗೆ ವಹಿಸಿರುವದನ್ನು ಸ್ವಾಗತಿಸುತ್ತೇನೆ. ತನಿಖೆ ಸಂದರ್ಭ ಯಾರೂ ದೂರು ಸಲ್ಲಿಸಿದ್ದಾರೋ ಅವರುಗಳ ಪುರಾವೆಗಳಿದ್ದರೆ ಸಿಬಿಐಗೆ ನೀಡಲಿ. ಈ ಸಂಬಂಧ ರಾಜೀನಾಮೆ ನೀಡುವ ಅವಶ್ಯಕತೆಯೇ ಇಲ್ಲವೆಂದು ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.

ರಾಜೀನಾಮೆ ಪಡೆಯಲಿ

ಪ್ರಕರಣವನ್ನು ಸಿಬಿಐಗೆ ವಹಿಸಿರುವದು ಸ್ವಾಗತಾರ್ಹ. ಮೃತ ಗಣಪತಿ ಅವರು ಹೆಸರಿಸಿರುವ ಆರೋಪಿಗಳಾದ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳು ಈ ಕೂಡಲೇ ರಾಜೀನಾಮೆ ನೀಡಬೇಕು. ಸರಕಾರ ಮೂವರ ರಾಜೀನಾಮೆ ಪಡೆಯಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ನ್ಯಾಯ ದೇಗುಲದಿಂದ ನ್ಯಾಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದ ದಿನಗಳಿಂದಲೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಗಣಪತಿ ಕುಟುಂಬ ವರ್ಗಕ್ಕೆ ನೈತಿಕ ಧೈರ್ಯದೊಂದಿಗೆ ಕಾನೂನಾತ್ಮಕ ಹೋರಾಟ ನಡೆಸಿದ ಫಲವಾಗಿ ಇಂದು ಸರ್ಮೋಚ್ಛ ನ್ಯಾಯಾಲಯ ಸಿಬಿಐ ವಶಕ್ಕೆ ನೀಡಿದೆ. ನ್ಯಾಯ ದೇಗುಲದಿಂದ ನ್ಯಾಯ ಸಿಗಲಿದ್ದು, ಸ್ವಾಗತಾರ್ಹ ಆದೇಶವಾಗಿದೆ. ಈ ಸಂಬಂಧ ಸಚಿವರಾಗಿರುವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದ್ದಾರೆ.

ಸಂತಸ ತಂದಿದೆ

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗೋಯಲ್ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಪೀಠ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆದೇಶ ನೀಡಿದೆ. ಈ ತೀರ್ಪು ತಮಗೆ ಸಂತಸ ತಂದಿದೆ ಎಂದು ಗಣಪತಿ ಸಹೋದರ ಮಾಚಯ್ಯ ಪ್ರತಿಕ್ರಿಯಿಸಿದ್ದಾರೆ. ಇದು ನ್ಯಾಯಕ್ಕೆ ಸಂದ ಜಯ ಎಂದ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿರುವ ಸುಪ್ರೀಂಕೋರ್ಟ್ ಆದೇಶ ಸ್ವಾಗತಾರ್ಹ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು ಈ ಮೊದಲೇ ಸಿಬಿಐಗೆ ವಹಿಸುವಂತೆ ತಾನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ ರಾಜ್ಯ ಸರಕಾರ ತನಿಖೆಯನ್ನು ಸಿಐಡಿಗೆ ಕೊಟ್ಟು ತರಾತುರಿಯಲ್ಲಿ ತನಿಖೆ ನಡೆಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿರುವ ಅವರು, ಇದು ವಿಧಿವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಜಗಜ್ಜಾಹೀರಾಗಿದೆ. ಇದೀಗ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದ ಈ ಪ್ರಕರಣಕ್ಕೆ ಮತ್ತು ಕುಟುಂಬ ಸದಸ್ಯರಿಗೆ ನ್ಯಾಯ ಸಿಗುವ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.