ಮಡಿಕೇರಿ, ಸೆ. 6: ರಾಜ್ಯ ಬಿಜೆಪಿ ಯುವ ಮೋರ್ಚಾ ಕರೆ ನೀಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಇಂದು ಕೊಡಗಿನಿಂದ ಹೊರಟಿದ್ದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ತಡೆಯೊಡ್ಡಿತು. ಜಿಲ್ಲಾ ಕೇಂದ್ರ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಹಾಗೂ ಗೋಣಿಕೊಪ್ಪ ನಗರಗಳನ್ನು ಕೇಂದ್ರ ವಾಗಿಟ್ಟುಕೊಂಡು ಮಂಗಳೂರಿಗೆ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್ಯಾಲಿಗೆ ಅವಕಾಶ ನೀಡದ ಪೊಲೀಸ್ ಇಲಾಖೆ ರ್ಯಾಲಿಗೆ ಮುಂದಾಗಿದ್ದ ಹಲವಾರು ಮಂದಿಯನ್ನು ಬಂಧಿಸಿದರು. ಮಂಗಳೂರು ಚಲೋ ರ್ಯಾಲಿಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ರ್ಯಾಲಿಗೆ ನಿಷೇಧ ಹೇರಿರುವದಾಗಿ ಪತ್ರಿಕೆ - ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮಡಿಕೇರಿಯಲ್ಲಿ ಇಂದು ಬೆಳಗ್ಗಿ ನಿಂದಲೇ ಕೆಎಸ್‍ಆರ್‍ಪಿ, ಇಂಡಿಯನ್ ರಿಸರ್ವ್ ಬೆಟಾಲಿಯನ್, ಕಮಾಂಡೋಸ್‍ಗಳು ಸೇರಿದಂತೆ ನೂರಾರು ಮಂದಿ ಪೊಲೀಸರು ಜಿ.ಟಿ. ವೃತ್ತ, ಮೈಸೂರು - ಮಂಗಳೂರು ರಸ್ತೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸ ಲ್ಪಟ್ಟಿದ್ದರು. ಮಧ್ಯಾಹ್ನ 3 ಗಂಟೆಗೆ ಸುದರ್ಶನ ವೃತ್ತದಿಂದ ಬೈಕ್ ರ್ಯಾಲಿ ಆರಂಭವಾಗಬೇಕಿತ್ತಾದರೂ ಸುಮಾರು ಮುಕ್ಕಾಲು ತಾಸಿನ ಬಳಿಕ ಬಿಜೆಪಿ ಕಾರ್ಯಕರ್ತರು ಬೈಕ್‍ಗಳಲ್ಲಿ ಮಂಗಳೂರು ರಸ್ತೆಯತ್ತ ಸಾಗಲು ಮುಂದಾದರು. ಈ ವೇಳೆ ಪೂರ್ವ ತಯಾರಿಯಾಗಿ ಜಿ.ಟಿ. ರಸ್ತೆಯ ನಗರಸಭಾ ಪ್ರಾಥಮಿಕ ಶಾಲೆ ಬಳಿ ಆರೇಳು ಬ್ಯಾರಿಕೇಡ್‍ಗಳೊಂದಿಗೆ ಸನ್ನದ್ಧವಾಗಿದ್ದ ಪೊಲೀಸ್ ಪಡೆ ಬೈಕ್‍ಗಳನ್ನು ಅಡ್ಡಗಟ್ಟಿತು. ಈ ಸಂದರ್ಭ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

(ಮೊದಲ ಪುಟದಿಂದ) ಸ್ಥಳದಿಂದ ಹಿಂತಿರುಗುವಂತೆ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಮನವಿ ಮಾಡಿದರೂ ಬಿಜೆಪಿ ಕಾರ್ಯಕರ್ತರು ಮನವಿಗೆ ಸ್ಪಂದಿಸದಿದ್ದಾಗ ಪೊಲೀಸರು ಶಾಸಕ ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ತಾಲೂಕು ಅಧ್ಯಕ್ಷ ಅಗೋಳಿಕಜೆ ಧನಂಜಯ ಸೇರಿದಂತೆ ಸುಮಾರು 30 ಮಂದಿಯನ್ನು ಬಂಧಿಸಿ ಮೈತ್ರಿಹಾಲ್‍ಗೆ ಕರೆದೊಯ್ದು ಕೆಲ ಗಂಟೆಗಳ ಕಾಲ ಬಂಧಿಗಳಾಗಿಸಿದರು.

ಈ ಸಂದರ್ಭ ಪತ್ರಿಕೆಗಳೊಂದಿಗೆ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಪರೀತ ಬುದ್ಧಿ ತೋರಿಸುತ್ತಿದ್ದು, ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಮಂಗಳೂರಿನ ರ್ಯಾಲಿಯಲ್ಲಿ ಕೊಡಗಿನವರು ಭಾಗವಹಿಸುವದು ಖಚಿತ. ಸರ್ಕಾರದ ಜನವಿರೋಧಿ ನೀತಿ ವಿರುದ್ಧ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮತ್ತಿತರರು ಇದ್ದರು.

ಗೋಣಿಕೊಪ್ಪಲಿನಲ್ಲಿ ಬಂಧನ

ತಾಲೂಕು ಬಿ.ಜೆ.ಪಿ. ಯುವಮೋರ್ಚ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಮುಂದಾದ ಬಿ.ಜೆ.ಪಿ. ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ತಾಲೂಕಿನ ಬೂತ್ ಮಟ್ಟದ ಕಾರ್ಯಕರ್ತರು ಬೈಕ್‍ನ ಮೂಲಕ ಜಾಥ ಹೊರಡಲು ಸಜ್ಜಾಗಿದ್ದರು. ಆರ್.ಎಂ.ಸಿ. ಆವರಣದಿಂದ ಬೈಕ್ ಜಾಥಕ್ಕೆ ಚಾಲನೆ ನೀಡಿ ರಸ್ತೆಯ ಬದಿಗೆ ಬೈಕ್‍ಗಳನ್ನು ತಂದಾಗ ಪೊಲೀಸರು ತಡೆದು ತಾಲೂಕು ಬಿ.ಜೆ.ಪಿ. ಯುವಮೋರ್ಚ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಅವರನ್ನು ಮೊದಲಿಗೆ ಬಂಧಿಸಿದರು.

ನಂತರ ಪೊಲೀಸರು ಜಾಥಕ್ಕೆ ಮುಂದಾದ ಕಾರ್ಯಕರ್ತರನ್ನು ತಡೆದು ಬಂಧಿಸಿ, ಬಸ್ಸಿನೊಳಕೆ ನೂಕಿದರು. ನಂತರ ಕೊಡಗು ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಬಂಧಿತರನ್ನು ಕೆಲ ಗಂಟೆಗಳ ಕಾಲ ಬಂಧಿಗಳಾಗಿರಿಸಿದರು.

ಬೈಕ್ ಜಾಥಾವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿರುವದು ಖಂಡನೀಯ. ಪ್ರತಿಭಟನೆಯನ್ನು ಕಾಂಗ್ರೆಸ್ ಸರಕಾರ ತಡೆಯುವ ಉದ್ದೇಶವಾದರು ಏನು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ ಎಂಬ ನಂಬಿಕೆ ಕಾಣುತ್ತಿಲ್ಲ. ಸರಕಾರ ಬೈಕ್ ರ್ಯಾಲಿಗೆ ಅನುಮತಿ ನಿರಾಕರಿಸುವ ಮೂಲಕ ತನ್ನ ಸಣ್ಣತನವನ್ನು ತೋರ್ಪಡಿಸುತ್ತಿದೆ. ಸಿದ್ದರಾಮಯ್ಯರ ಭ್ರಷ್ಟ ಸರಕಾರ ಆಡಳಿತ ಕೊನೆಯ ಹಂತಕ್ಕೆ ತಲುಪಿದ್ದು, ಕಾಂಗ್ರೆಸ್ ಸರಕಾರದ ಆಡಳಿತದಿಂದ ರಾಜ್ಯ ಬಂಧಮುಕ್ತಗೊಳ್ಳಲಿದೆ. ಮುಂದಿನ 7 ತಿಂಗಳಲ್ಲಿ ಸಿದ್ದರಾಮಯ್ಯ ಸರಕಾರದ ನಡವಳಿಕೆಗೆ ತಕ್ಕ ಪಾಠ ಜನರೆ ಕಲಿಸುತ್ತಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಸಿದ್ದರಾಮಯ್ಯ ಸರಕಾರ ಸಮಾಜ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಲ್ಪಸಂಖ್ಯಾತರ ಮತಗಳಿಗಾಗಿ ತಂತ್ರಗಳನ್ನು ರೂಪಿಸುವ ಮೂಲಕ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು. ತಾಲೂಕು ಯುವಮೋರ್ಚ ಅಧ್ಯಕ್ಷ ಅಜಿತ್ ಕರುಂಬಯ್ಯ ಮಾತನಾಡಿದರು.

ಜಿ.ಪಂ. ಅಧ್ಯಕ್ಷ ಹರೀಶ್, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಜಿಲ್ಲಾ ಯುವಮೋರ್ಚ ಅಧ್ಯಕ್ಷ ಗಪ್ಪಣ್ಣ, ಮಹಿಳಾ ಮೋರ್ಚ ಅಧ್ಯಕ್ಷೆ ಯಮುನಾ ಚಂಗಪ್ಪ, ತಾಲೂಕು ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ತಾಲೂಕು ಯುವ ಮೋರ್ಚ ಉಪಾಧ್ಯಕ್ಷ ತೊರೀರ ವಿನು, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಗ್ರಾ.ಪಂ. ಸದಸ್ಯರುಗಳಾದ ಕೆ.ಪಿ. ಬೋಪಣ್ಣ, ಸುರೇಶ್ ರೈ, ಪೊನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಂಡ ಮಂಜು, ಕಬೀರ್ ದಾಸ್ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾದರು.

ಸೋಮವಾರಪೇಟೆಯಲ್ಲಿ ಬಂಧನ

ರಾಜ್ಯಾದ್ಯಂತ ನಡೆದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ, ಕೆಎಫ್‍ಡಿ, ಪಿಎಫ್‍ಐ ಸೇರಿದಂತೆ ಇನ್ನಿತರ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಲಾಗಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು.

ಇಂದು ಮಧ್ಯಾಹ್ನ ಸಮೀಪದ ಆಂಜನೇಯ ದೇವಾಲಯದಿಂದ 70ಕ್ಕೂ ಅಧಿಕ ಬೈಕ್‍ಗಳಲ್ಲಿ ಮಂಗಳೂರು ಚಲೋ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾರ್ಯಕರ್ತರಿಗೆ ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಬಳಿ ಪೊಲೀಸರು ತಡೆಯೊಡ್ಡಿದರು. ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ರಸ್ತೆಯ ಮುತ್ತಪ್ಪ ದೇವಾಲಯದ ಮುಂಭಾಗ ಹಾಗೂ ಕಕ್ಕೆಹೊಳೆ ಜಂಕ್ಷನ್ ಬಳಿ ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದ ಪೊಲೀಸರು, ಕಾರ್ಯಕರ್ತರ ಬಂಧನಕ್ಕೂ ಸಿದ್ಧತೆ ನಡೆಸಿದ್ದರು.

ಬೈಕ್ ರ್ಯಾಲಿ ಕಕ್ಕೆಹೊಳೆಗೆ ಆಗಮಿಸಿದ ಸಂದರ್ಭ ಮೊದಲು ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರು ಬೈಕ್‍ಗಳಿಗೆ ಅಡ್ಡಲಾಗಿ ನಿಂತು ರ್ಯಾಲಿ ನಡೆಸದಂತೆ ಸೂಚಿಸಿದರು. ಇದನ್ನು ಲೆಕ್ಕಿಸದ ಕಾರ್ಯಕರ್ತರು ಘೋಷಣೆಗಳನ್ನು ಮೊಳಗಿಸುತ್ತಾ, ಮುಂದೆ ಸಾಗಿದರು. ಅನತಿ ದೂರದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‍ಗಳನ್ನೂ ತಳ್ಳಿ ಪೊಲೀಸರ ಭದ್ರಕೋಟೆಯನ್ನು ಭೇದಿಸಲು ಯತ್ನಿಸಿದ ಸಂದರ್ಭ 50ಕ್ಕೂ ಅಧಿಕ ಮಂದಿ ಪೊಲೀಸರು ಗೋಡೆಯಂತೆ ಅಡ್ಡನಿಂತು ರ್ಯಾಲಿಗೆ ತಡೆಯೊಡ್ಡಿದರು.

ಈ ಸಂದರ್ಭ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಯುವ ಮೋರ್ಚಾ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಅರಣ್ಯ ಸಚಿವ ರಮಾನಾಥ ರೈ ಅವರುಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಮತಬ್ಯಾಂಕ್‍ಗಾಗಿ ಒಂದು ವರ್ಗವನ್ನು ಓಲೈಸುತ್ತಾ, ಅವರುಗಳ ಕಾನೂನು ಬಾಹಿರ ಕೃತ್ಯಗಳಿಗೆ ಸರ್ಕಾರವೇ ಶ್ರೀರಕ್ಷೆಯಾಗಿ ನಿಂತಿದೆ. ಹಿಂದೂಗಳ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದರೆ ಪೊಲೀಸರ ಬಲ ಪ್ರಯೋಗಿಸಿ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಮುಖಂಡರಾದ ಟಿ.ಕೆ. ರಮೇಶ್, ಎಂ.ಬಿ. ಅಭಿಮನ್ಯುಕುಮಾರ್, ಯುವ ಮೋರ್ಚಾದ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಸೇರಿದಂತೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಸೋಮವಾರಪೇಟೆ-ಮಡಿಕೇರಿ ಮುಖ್ಯರಸ್ತೆಯಲ್ಲಿ ಧರಣಿ ಕುಳಿತ ಕಾರ್ಯಕರ್ತರು ಪಿಎಫ್‍ಐ, ಕೆಎಫ್‍ಡಿ, ಎನ್‍ಡಿಎಫ್, ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ಸಲುವಾಗಿ ಸರ್ಕಾರಿ ಬಸ್‍ಗೆ ಹತ್ತಿಸುವ ಯತ್ನಕ್ಕೆ ಮುಂದಾಗುತ್ತಿದ್ದಂತೆ ಪರಸ್ಪರ ತಳ್ಳಾಟ ನಡೆಯಿತು.

ನಾವುಗಳೂ ಸಹ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರದ ವಿರುದ್ಧ ನಮ್ಮ ಹೋರಾಟವೇ ಹೊರತು ಪೊಲೀಸ್ ವಿರುದ್ಧ ಅಲ್ಲ, ನಮ್ಮನ್ನೇಕೆ ಬಂಧಿಸುತ್ತಿದ್ದೀರಿ. ಕಾನೂನು ವಿರೋಧಿ ಕೃತ್ಯ ಮಾಡಿಲ್ಲ. ಆದರೂ ಪೊಲೀಸ್ ಬಲ ಪ್ರಯೋಗಿಸಿ ಬಂಧಿಸುತ್ತಿರುವದು ಸರಿಯಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ, ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿರುವ ದುಷ್ಕರ್ಮಿಗಳನ್ನು ಮೊದಲು ಬಂಧಿಸಿ ಎಂದು ಅಸಮಾಧಾನ ಹೊರಹಾಕಿದರು. ಇವರ ಮಾತಿಗೆ ಕಿವಿಗೊಡದ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಶಿವಣ್ಣ ಸೇರಿದಂತೆ ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ಬಸ್‍ಗೆ ತುಂಬಿಸಿ ಇಲ್ಲಿನ ಒಕ್ಕಲಿಗರ ಸಮುದಾಯಭವನಕ್ಕೆ ಕರೆದೊಯ್ದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ 35(3) ಅನ್ವಯ ರ್ಯಾಲಿ, ಜಾಥಾ, ಪಾದಯಾತ್ರೆ, ಮೆರವಣಿಗೆ, ಪ್ರತಿಭಟನೆಗಳನ್ನು ನಿರ್ಬಂಧಿಸಿದ್ದರ ಪರಿಣಾಮ ಬೈಕ್ ಜಾಥಾದಲ್ಲಿ ಭಾಗವಹಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರನ್ನು ಬಂಧಿಸಲಾಯಿತು.

ಜಾಥಾ ಹೊರಡುವದಕ್ಕೂ ಮುನ್ನ ಇಲ್ಲಿನ ಆಂಜನೇಯ ದೇವಾಲಯದ ಬಳಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಎಸ್.ಜಿ. ಮೇದಪ್ಪ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಓಲೈಕೆಗೆ ಮುಂದಾಗಿದೆ. ಸಚಿವ ರಮಾನಾಥ ರೈ ಅವರು ಇಂತಹ ಸಂಘಟನೆಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ ಕೋಮುಗಲಭೆ ನಡೆಸಿದ ನೂರಾರು ಪಿಎಫ್‍ಐ ಹಾಗೂ ಕೆಎಫ್‍ಡಿ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಯನ್ನು ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಸಮಾಜಘಾತುಕ ಶಕ್ತಿಗಳಿಗೆ ಬೆಂಬಲ ನೀಡಿದೆ ಎಂದು ಆರೋಪಿಸಿದರು.

ಬೈಕ್ ಜಾಥಾದಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ನಗರಾಧ್ಯಕ್ಷ ಶರತ್‍ಚಂದ್ರ, ಕಾರ್ಯದರ್ಶಿ ಪ್ರಸನ್ನ ನಾಯರ್, ಕೊಡಗು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯೆ ತಂಗಮ್ಮ, ಜಿ.ಪಂ. ಮಾಜೀ ಅಧ್ಯಕ್ಷ ಶಿವಪ್ಪ, ಮೋಹನ್‍ದಾಸ್, ಹುಲ್ಲೂರಿಕೊಪ್ಪ ಮಾದಪ್ಪ, ಸೋಮೇಶ್, ಮನುಕುಮಾರ್ ರೈ, ದರ್ಶನ್ ಜೋಯಪ್ಪ, ಮಸಗೋಡು ಸತೀಶ್, ಹರಗ ಉದಯ, ತಾಕೇರಿ ಪೊನ್ನಪ್ಪ, ಪಿ. ಮಧು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರು ಜಾಥಾದಲ್ಲಿ ಭಾಗವಹಿಸಿದ್ದ 62 ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮತ್ತು 30 ಬೈಕ್‍ಗಳನ್ನು ವಶಕ್ಕೆ ತೆಗೆದುಕೊಂಡು ಮುಚ್ಚಳಿಕೆ ಪಡೆದ ನಂತರ ಬಿಡುಗಡೆ ಮಾಡಿದರು. ಪೊಲೀಸ್ ಮೀಸಲು ಪಡೆಯ ಸಿಬ್ಬಂದಿಗಳೂ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಪೊಲೀಸರು ಬಂದೋಬಸ್ತ್‍ನಲ್ಲಿದ್ದರು.

ಕುಶಾಲನಗರ

ಮಂಗಳೂರು ಚಲೋ ಬೈಕ್ ರ್ಯಾಲಿ ಹಿನೆÀ್ನಲೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಸೇರಿದಂತೆ 50 ಕ್ಕೂ ಅಧಿಕ ಕಾರ್ಯಕರ್ತರು, ಪ್ರಮುಖರನ್ನು ಕುಶಾಲನಗರದಲ್ಲಿ ಪೊಲೀಸರು ಬಂಧಿಸಿದರು.

ಕುಶಾಲನಗರ ಮಾರುಕಟ್ಟೆ ಆವರಣದಿಂದ ದ್ವಿಚಕ್ರ ವಾಹನಗಳಲ್ಲಿ ಘೋಷಣೆ ಕೂಗುತ್ತಾ ಹೊರಟಿದ್ದ ಕಾರ್ಯಕರ್ತರನ್ನು ಸ್ಥಳೀಯ ಗಣಪತಿ ದೇವಾಲಯ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡರು. ಯಾವದೇ ರ್ಯಾಲಿ, ಸಭೆ ನಡೆಸದಂತೆ ಜಿಲ್ಲೆಯಲ್ಲಿ ನಿರ್ಭಂಧÀ ಹೇರಿದ್ದರೂ ಬಿಜೆಪಿ ಮಾಜಿ ಅಧ್ಯಕ್ಷ ಮನುಮುತ್ತಪ್ಪ, ಸ್ಥಳೀಯ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಯುವಮೋರ್ಚಾ ಕಾರ್ಯಕರ್ತರು ತೆರಳುತ್ತಿದ್ದ ಸಂದರ್ಭ ಡಿವೈಎಸ್ಪಿ ಸಂಪತ್‍ಕುಮಾರ್ ನೇತೃತ್ವದಲ್ಲಿ ಪೊಲೀಸರು ಅವರುಗಳನ್ನು ತಡೆದು ಬಸ್‍ನಲ್ಲಿ ಬೇರೆಡೆಗೆ ಕೊಂಡೊಯ್ದರು. ಯಾವದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದ ಜಿಲ್ಲಾಡಳಿತ ಕುಶಾಲನಗರ ವ್ಯಾಪ್ತಿಗೆ ವಿಶೇಷ ದಂಡಾಧಿಕಾರಿಯಾಗಿ ಬಿಸಿಎಂ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ಅವರನ್ನು ನಿಯೋಜಿಸುª Àದರೊಂದಿಗೆ ಗಡಿಭಾಗದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೆಎಸ್‍ಆರ್‍ಪಿ ತುಕಡಿಗಳು ಸೇರಿದಂತೆ ನೂರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು.