ಮಡಿಕೇರಿ, ಸೆ. 5: ತಾ. 6 ರಂದು ಮಂಗಳೂರು ಚಲೋ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ಜಿಲ್ಲೆಯಲ್ಲೂ ನಿಷೇಧ ಹೇರಲಾಗಿದ್ದು, ನಿಷೇಧಕ್ಕೆ ಜಿಲ್ಲಾಧಿಕಾರಿ ಆರ್. ವಿನ್ಸೆಂಟ್ ಡಿಸೋಜ ಅವರು ಈ ಕೆಳಗಿನ ಕಾರಣಗಳನ್ನು ನೀಡಿದ್ದಾರೆ.

ಕೊಡಗು ಜಿಲ್ಲೆ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದ್ದು, ರಾಜ್ಯ ಹಾಗೂ ಇತರ ರಾಜ್ಯಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಜಿಲ್ಲೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡಮಟ್ಟದಲ್ಲಿ ಮತೀಯ ಸಮಸ್ಯೆಯಾಗಿ ಮಾರ್ಪಟ್ಟು ನೇರವಾಗಿ ಜನಸಾಮಾನ್ಯರಿಗೆ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಕೆಲವು ಪ್ರದೇಶಗಳು ಕೋಮು ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಲ್ಪಟ್ಟಿದೆ.

ಕೊಡಗು ಜಿಲ್ಲೆಯು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಜಿಲ್ಲೆಯಾಗಿದ್ದು, ಮಾಧ್ಯಮಗಳ ಮಾಹಿತಿ ಪ್ರಕಾರ ಸುಮಾರು 20 ರಿಂದ 30 ಸಾವಿರ ಜನರು ಒಮ್ಮೆಗೆ ಮಂಗಳೂರಿಗೆ ತೆರಳಿ ಅಲ್ಲಿ ಗುಂಪು ಸೇರಿ ಒಂದು ವೇಳೆ ಗಲಾಟೆ ನಡೆದಲ್ಲಿ ಇದರ ಪ್ರಭಾವವು ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಗೆ ನೇರವಾಗಿ ಬೀರಲಿದ್ದು, ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಆಸ್ತಿ ಹಾನಿ ಹಾಗೂ ಪ್ರಾಣ ಹಾನಿಯಂತಹ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೊಡಗು ಜಿಲ್ಲೆಯೊಳಗೆ ಸುಮಾರು 1000-2000 ಬೈಕುಗಳು ಒಮ್ಮೆಗೆ ಬರುವದರಿಂದ ಬೈಕ್ ರ್ಯಾಲಿಯ ಉದ್ದ ಸುಮಾರು 5 ಕಿಮೀ. ಆಗುತ್ತದೆ. ಇಂತಹ ಬೈಕ್ ರ್ಯಾಲಿ ಸಾಗುವಾಗ ಅಲ್ಲಲ್ಲಿ ನಗರ ಮತ್ತು ಪಟ್ಟಣಗಳು, ತಿರುವುಗಳು, ಕಣಿವೆಗಳು, ಕಿರಿದಾದ ರಸ್ತೆಗಳು, ಹೊಂಡಗಳು ಇರುವದರಿಂದ ಬೈಕ್ ಸವಾರರು ಒಬ್ಬರ ಹಿಂದೆ ಒಬ್ಬರು ಶಿಸ್ತುಬದ್ದವಾಗಿ ಸಾಲಾಗಿ ಹೋಗುವದು ಅಸಾಧ್ಯವಾಗಿರುತ್ತದೆ.

ಈಗಾಗಲೇ ಕೊಡಗು ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಜಿಲ್ಲೆಯ ಹೆಚ್ಚಿನ ಸಿಬ್ಬಂದಿಗಳನ್ನು ಗಣೇಶ ಮಂಟಪ ಹಾಗೂ ವಿಸರ್ಜನೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಬೈಕ್ ರ್ಯಾಲಿಯ ಪ್ರಭಾವದಿಂದಾಗಿ ಕೋಮು ಗಲಭೆ ಉಂಟಾಗುವ ಸಾಧ್ಯತೆ ಇರುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಒಂದೇ ಬಾರಿಗೆ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ರಸ್ತೆಯ ಒಂದೇ ಬದಿಯಲ್ಲಿ ಚಲಿಸಬೇಕಾದ್ದ ರಿಂದ, ದ್ವಿಚಕ್ರ ವಾಹನಗಳ ಅಪಘಾತ ಉಂಟಾಗಿ, ಸಾವುನೋವು ಸಂಭವಿಸುವ ಸಾಧ್ಯತೆ ಇರುತ್ತದೆ.

ಕೊಡಗು ಜಿಲ್ಲೆಯು ಬೆಟ್ಟ ಗುಡ್ಡ ಪ್ರದೇಶವಾಗಿದ್ದು, ಇಲ್ಲಿನ ರಸ್ತೆಗಳು ಕಿರಿದಾಗಿದ್ದು, ತಿರುವಿನಿಂದ ಕೂಡಿರುತ್ತದೆ. ಸದರಿ ರಸ್ತೆಯ ಇಕ್ಕೆಲಗಳಲ್ಲಿ ಮೀಸಲು ಅರಣ್ಯ ಪ್ರದೇಶ ಇರುತ್ತದೆ. ಸಮಾಜಘಾತುಕ ಶಕ್ತಿಗಳು ಈ ಸಂದರ್ಭವನ್ನು ಬಳಸಿಕೊಂಡು ಅನ್ಯಕೋಮಿನ ಧಾರ್ಮಿಕ ಭಾವನೆಗೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇರುತ್ತದೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಲಂ 144 ಸಿಆರ್‍ಪಿಸಿ ಜಾರಿಯಲ್ಲಿದ್ದ ಸಮಯದಲ್ಲಿ ಬಿಜೆಪಿ ಪಕ್ಷದವರು ಇದನ್ನು ಉಲ್ಲಂಘಿಸಿ ದೊಡ್ಡ ಮಟ್ಟದ ರ್ಯಾಲಿ ಮಾಡಿದ್ದು, ಇದರಿಂದ ಸಾರ್ವಜನಿಕ ಜನ ಜೀವನಕ್ಕೆ ಹಾಗೂ ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿದ್ದು, ಇದನ್ನು ತಡೆಯಲು ಪೊಲೀಸರಿಗೆ ತುಂಬಾ ತೊಂದರೆಯಾಗಿರುತ್ತದೆ. ಅದೇ ರೀತಿ ಎಲ್ಲಾ ಜಿಲ್ಲೆಗಳಿಂದ ಒಮ್ಮೆಗೆ 25000 ಜನರು ಬೈಕಿನಲ್ಲಿ ಬಂದು ಮಂಗಳೂರು ನಗರದಲ್ಲಿ ಕಾರ್ಯಕ್ರಮ ನಡೆಸಿದರೆ ಮಂಗಳೂರು ನಗರದಲ್ಲಿ ದೊಡ್ಡ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಸಾಧ್ಯತೆ ಇರುವದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ತನ್ನ ಹಕ್ಕನ್ನು ಚಲಾಯಿಸುವಾಗ ಅದರಿಂದ ಮತ್ತೊಬ್ಬ ಬ್ಯಕ್ತಿಯ ಹಕ್ಕು ಬಾಧ್ಯತೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವದು ಪೊಲೀಸರ ಆದ್ಯ ಕರ್ತವ್ಯ ಆಗಿರುತ್ತದೆ.

ಬೈಕ್ ರ್ಯಾಲಿ ಕೊಡಗು ಜಿಲ್ಲೆಯಲ್ಲಿ ಹಾದು ಹೋಗಲು ಕನಿಷ್ಟ 4 ಗಂಟೆ ಬೇಕಾಗಿದ್ದು, ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಶಾಲಾ, ಕಾಲೇಜು ಮಕ್ಕಳ ಓಡಾಟ, ಕೋರ್ಟ್ ಕಚೇರಿ, ಇತರೆ ದೈನಂದಿನ ಕೆಲಸ ಕಾರ್ಯಗಳಿಗೆ ಹಾಗೂ ತುರ್ತು ಸೇವೆಗಳಾದ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳ ಓಡಾಟಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಕೊಡಗು ಜಿಲ್ಲೆಯಲ್ಲಿ ಬೈಕ್ ರ್ಯಾಲಿಯು ಸಂಪೂರ್ಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವದರಿಂದ ಸಾರ್ವಜನಿಕ ವಾಹನಗಳು, ಸರಕು ಸಾಗಾಣಿಕಾ ವಾಹನಗಳು ನಿಗದಿತ ಸಮಯಕ್ಕೆ ತಲುಪದೇ ಜನಜೀವನ ಅಸ್ತವ್ಯಸ್ಥ ಉಂಟಾಗುವದಲ್ಲದೇ, ಕೊಡಗು ಜಿಲ್ಲೆಯಿಂದ ಹೊರ ಹೋಗುವ ಹಾಗೂ ಒಳ ಬರುವ ಸಾರಿಗೆ ವಾಹನಗಳಿಗೆ ತೀವ್ರ ತೊಂದರೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲ ಆಗುವ ಸಾಧ್ಯತೆ ಇರುತ್ತದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಾ. 5 ರಂದು 10 ಗಂಟೆಯಿಂದ ತಾ. 9 ರಂದು ಬೆಳಿಗ್ಗೆ 6 ಗಂಟೆಯವರೆಗೆ ಕೊಡಗು ಜಿಲ್ಲೆಯಲ್ಲಿ ಯಾವದೇ ಸಂಘಟನೆಗಳ ಸದಸ್ಯರು, ವ್ಯಕ್ತಿಗಳು ಯಾವದೇ ರೀತಿಯ ಬೈಕ್ ಇತ್ಯಾದಿ ವಾಹನಗಳ ಮೂಲಕ ರ್ಯಾಲಿ, ಜಾಥಾ, ಪಾದಯಾತ್ರೆ, ಮೆರವಣಿಗೆ ಮತ್ತು ಪ್ರತಿಭಟನೆಗಳನ್ನು ನಡೆಸುವದನ್ನು ಕಲಂ 35(3) ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ನಿಷೇಧಿಸಿ ಆದೇಶ ಹೊರಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರ ಕೋರಿಕೆಯಂತೆ. ಜಿಲ್ಲೆಯು ಕಾನೂನು ಸುವ್ಯವಸ್ಥೆ ಕಾಪಾಡುವದು, ಎಲ್ಲಾ ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮಾಡುವದು, ಸಮಾಜದಲ್ಲಿ ಎಲ್ಲಾ ಸಮುದಾಯದವರನ್ನು ರಕ್ಷಣೆ ಮಾಡುವದು, ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಆದ್ಯ ಜವಾಬ್ದಾರಿಯಾಗಿದ್ದು, ಉಲ್ಲೇಖ (1) ಮತ್ತು (2)ರ ಪತ್ರಗಳಲ್ಲಿನ ಕೋರಿಕೆಯನ್ನು ಗಮನದಲ್ಲಿಟ್ಟು ಕೊಂಡು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಆದೇಶ ಹೊರಡಿಸಿದ್ದಾರೆ.