ಶ್ರೀಮಂಗಲ, ಸೆ. 5 : ಮಾನವನ ಜೀವನದ ವಿವಿಧ ಹಂತಗಳ ಬೆಳವಣಿಗೆಯಲ್ಲಿ ರಂಗಭೂಮಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೀವನದಲ್ಲಿ ಬರುವ ಕಷ್ಟ-ನಷ್ಟಗಳು ಸುಖ-ದುಃಖಗಳನ್ನು ದೃಢ ಮನಸ್ಸಿನಿಂದ ಎದುರಿಸುವ ಶಕ್ತಿಯನ್ನು ರಂಗಭೂಮಿ ನೀಡುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ, ಹಿರಿಯ ರಂಗಕರ್ಮಿ ಹಾಗೂ ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರೂ ಆದ ಬಾಸುಮ ಕೊಡಗು ಅವರು ಹೇಳಿದರು.

ಯುನೈಟೆಡ್ ಕೊಡವ ಅರ್ಗನೈ ಸೇಷನ್ (ಯುಕೊ) ಸಂಘಟನೆಯ ವತಿಯಿಂದ ಪೊನ್ನಂಪೇಟೆ ಪ್ರಶಾಂತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ರಂಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ಸಮಾಜದಲ್ಲಿ ಜನರು ಸಿನಿಮಾ ಹಾಗೂ ಪಾಶ್ಚಾತ್ಯ ಸಂಗೀತದ ಕಡೆ ಒಲವು ತೋರಿಸುತ್ತಿರುವದು ವಿಷಾದನೀಯ. ರಂಗಭೂಮಿ ಎಂಬದು ಒಂದು ವಿಸ್ತಾರವಾದ ಪ್ರಪಂಚ. ಇಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವದ ರಿಂದ ಜೀವನದ ಮಹತ್ವದೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವಿಸಲು ಸಾಧ್ಯ. ಎಂದರು.

ರಂಗ ಕಿಶೋರ ರಾಷ್ಟ್ರೀಯ ನಾಟಕ ಅಕಾಡೆಮಿ ಹುಬ್ಬಳ್ಳಿ ಇದರ ರಾಷ್ಟ್ರೀಯ ಸಂಯೋಜಕರಾದ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪದ್ಮ ಮಾತನಾಡಿ ರಂಗಭೂಮಿ ಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು ಎಂದರು. ಮುಖ್ಯ ಅತಿಥಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಪತ್ರಕರ್ತ ಅಣ್ಣೀರ ಹರೀಶ್ ಮಾದಪ್ಪ ಮಾತನಾಡಿ, ನಾಟಕದ ಸಂಭಾಷಣೆ, ಅಭಿನಯ, ಜನರ ಮನಸ್ಸಿನಲ್ಲಿ ಸದಾ ಕಾಲ ಉಳಿಯುತ್ತದೆ. ಈ ನಿಟ್ಟಿನಲ್ಲಿ ನಾಟಕವು ಪ್ರಮುಖ ಆಕರ್ಷಣೆ ಯಾಗಿದ್ದು, ಪ್ರಸ್ತುತ ವಾತಾವರಣ ದಲ್ಲೂ ನಾಟಕದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದು ತಿಳಿಸಿದರು.

ಯುನೈಟೆಡ್ ಕೊಡವ ಅರ್ಗನೈಸೇಷನ್ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಕಳೆದ 4 ವರ್ಷಗಳಿಂದ ಯುಕೊ ಸಂಘಟನೆ ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲೇ ಒಂದು ಉತ್ತಮವಾದ ನಾಟಕ ತಂಡವನ್ನು ಕಟ್ಟುವ ಚಿಂತನೆ ಯಿದ್ದು, ಇದಕ್ಕಾಗಿ ಈ ರಂಗಭೂಮಿ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಿಬಿರಗಳನ್ನು ಆಯೋಜನೆ ಮಾಡುವದರ ಮೂಲಕ ಪ್ರತಿಭೆ ಗಳನ್ನು ಗುರುತಿಸಿ ಜಿಲ್ಲೆಯಲ್ಲೆ ಒಂದು ಉತ್ತಮವಾದ ಕಲಾ ತಂಡದ ರಚನೆ ಯನ್ನು ಮಾಡಲಾಗುವದು ಎಂದರು. ಕಾರ್ಯಕ್ರಮದಲ್ಲಿ ಉಳುವಂಗಡ ಲೋಹಿತ್ ಭೀಮಯ್ಯ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ವೇದಿಕೆಯಲ್ಲಿ ಕೊಡಗಿನ ಪ್ರಖ್ಯಾತ ರಂಗಕರ್ಮಿ ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿ ಮದ್ರಿರ ಸಂಜು ಬೆಳ್ಯಪ್ಪ, ಹಾಗೂ ಹಿರಿಯ ರಂಗಕರ್ಮಿ ಶ್ರೀನಿವಾಸ್ ನಾಯ್ಡು ಮಾತನಾಡಿ ದರು. ಈ ಸಂದರ್ಭ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.

ರಂಗ ಕಿಶೋರ ರಾಷ್ಟ್ರೀಯ ನಾಟಕ ಅಕಾಡೆಮಿ ಹುಬ್ಬಳ್ಳಿ ಇದರ ರಾಷ್ಟ್ರೀಯ ಸಂಯೋಜಕರಾದ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪದ್ಮ ತಮ್ಮ ಅನುಭವವನ್ನು ಹಂಚಿಕೊಂಡರು.