ಶ್ರೀಮಂಗಲ, ಸೆ. 6: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವಿಯೆಟ್ನಾಮ್‍ನಿಂದ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡ ಕರಿಮೆಣಸನ್ನು ಕೊಡಗಿನ ಕರಿಮೆಣಸಿನೊಂದಿಗೆ ಮಿಶ್ರಣ ಮಾಡಿ ಜಿಲ್ಲೆಯ ಮತ್ತು ಹೊರ ರಾಜ್ಯದ ವಿವಿಧ ಕಡೆಗಳಿಗೆ ಮಾರಾಟ ಮಾಡಿರುವ ಗೋಣಿಕೊಪ್ಪದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳಾದ ಜತಿನ್ ಷಾ ಒಡೆತನದ ಕಾವೇರಿ ಎಂಟರ್ ಪ್ರೈಸಸ್ ಹಾಗೂ ರೋಸ್ ಮೇರಿ ಇಂಟರ್ ನ್ಯಾಷನಲ್ ಸಂಸ್ಥೆಯ ಹೆಸರಿನ ಒಡೆತನ ಹೊಂದಿರುವ ಸೌರವ್ ಬಂಕ, ಶಿವಕುಮಾರ್‍ಬಂಕ ಹಾಗೂ ಕೃಷಿ ಮಾರುಕಟ್ಟೆಯ ಕಾರ್ಯದರ್ಶಿ ವಿರುದ್ಧ ಪೊಲೀಸ್ ದೂರು ದಾಖಲು ಮಾಡುವಂತೆ ಹಾಗೂ ತಾ. 11 ರಂದು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಪ್ರಕರಣದ ಪ್ರಮುಖ ರೂವಾರಿಗಳ ವ್ಯಾಪಾರ ಪರವಾನಿಗೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಜಿಲ್ಲಾ ಬೆಳೆಗಾರ ಒಕ್ಕೂಟದ ವೀರಾಜಪೇಟೆ ತಾಲೂಕು ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಕೃಷಿ ಉತ್ಪನ್ನ ಮಾರುಕಟ್ಟೆ
(ಮೊದಲ ಪುಟದಿಂದ) ಸ್ಥಳೀಯ ಕೃಷಿಕರು ಬೆಳೆದಂತಹ ಬೆಳೆಗಳನ್ನು ಮಾರಾಟ ಮಾಡಲು ಇರುವಂತದ್ದು. ಆದರೆ, ನಿಯಮವನ್ನು ಮೀರಿ ಕಾವೇರಿ ಎಂಟರ್ ಪ್ರೈಸಸ್ ಹಾಗೂ ರೋಸ್ ಮೇರಿ ಇಂಟರ್‍ನ್ಯಾಷನಲ್ ಸಂಸ್ಥೆ ವಿಯೆಟ್ನಾಮ್‍ನಿಂದ ಕರಿಮೆಣಸನ್ನು ಆಮದು ಮಾಡಿಕೊಂಡಿರುವದು ಖಂಡನೀಯ. ಯಾವದೇ ಉತ್ಪನ್ನಗಳನ್ನು ಕೃಷಿ ಮಾರುಕಟ್ಟೆ ಕೇಂದ್ರದ ಒಳಗೆ ತರುವಂತೆ ಇಲ್ಲ. ಕೊಡಗು ಜಿಲ್ಲೆಯಲ್ಲಿ ಸಾವಿರಾರು ಕರಿಮೆಣಸು ಬೆಳೆಗಾರರು ಉತ್ತಮ ಗುಣಮಟ್ಟದ ಕರಿಮೆಣಸನ್ನು ಬೆಳೆಯುತ್ತಿದ್ದು, ಹೊರ ದೇಶದಿಂದ ಕಳಪೆ ಗುಣಮಟ್ಟದ ಕರಿಮೆಣಸನ್ನು ತಂದು ಸ್ಥಳೀಯವಾಗಿ ಮಾರಾಟ ಮಾಡುವದರಿಂದ ಸ್ಥಳೀಯ ಕರಿಮೆಣಸಿನ ಬೆಲೆ ಕುಸಿತ ಕಂಡಿದೆ. ಸ್ಥಳೀಯ ಬೆಳೆಗಾರರಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಸಂಘಟಿತವಾಗಿ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ನಾಮನಿರ್ದೇಶಕ ಸದಸ್ಯ ಮಾಳೇಟಿರ ಬೋಪಣ್ಣ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಬೆಳೆಗಾರರಿಗೆ ಮಾಹಿತಿ ನೀಡುತ್ತಾ ಕೃಷಿ ಮಾರುಕಟ್ಟೆ ಆವರಣದೊಳಗೆ ಇರುವಂತಹ ಮಳಿಗೆಗಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇಲ್ಲಿ ದಾಸ್ತಾನು ಮಾಡಲಾಗಿದ್ದ ವಿಯೆಟ್ನಾಮ್‍ನ ಹೆಸರನ್ನು ನಮೂದು ಮಾಡಲಾಗಿರುವ ಕರಿಮೆಣಸು ಚೀಲ ಗೋಚರಿಸಿದೆ. ಇದನ್ನು ವಿಚಾರಣೆ ಮಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರ ಗಮನಕ್ಕೂ ತಂದಿದ್ದೇವೆ. ಅಧ್ಯಕ್ಷರು ವ್ಯಾಪಾರಿಗಳನ್ನು ಬೆಂಬಲಿಸುವಂತೆ ಮಾತನಾಡಿ ಇವರುಗಳು ಕೇಂದ್ರಕ್ಕೆ ಅಧಿಕ ಸೆಸ್ ಪಾವತಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯ ನಿಯಮಾನುಸಾರ ಸ್ಥಳೀಯ ರೈತರು ಬೆಳೆದ ಬೆಳೆಗಳನ್ನು ಮಾತ್ರ ಖರೀದಿ ಮಾಡಿ ವ್ಯಾಪಾರ ಮಾಡುವ ನಿಯಮವಿದೆ. ಆದರೆ, ಇವರು ಇದರ ಉಲ್ಲಂಘನೆ ಮಾಡಿದ್ದಾರೆ. ಇದರೊಂದಿಗೆ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರುವ ಮೂರು ಮಳಿಗೆಗಳನ್ನು (8,9,10) 2005ರಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳೆಗಾರರ ಬೆನ್ನೆಲು ಬಾಗಿರುವ ಬೆಳೆಗಾರರ ಒಕ್ಕೂಟದಿಂದ ಹೋರಾಟ ಹಮ್ಮಿಕೊಳ್ಳುವಂತೆ ಕರೆ ನೀಡಿದರು.
ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಮಾತನಾಡಿ, ಕೇಂದ್ರದಲ್ಲಿ ಸ್ಥಳೀಯ ಬೆಳೆಗಾರರು ಹಾಗೂ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಿ ಅದಕ್ಕೆ ಉತ್ತಮ ಬೆಲೆ ನೀಡುವ ಬದಲು ಸ್ಥಳೀಯ ಬೆಳೆಗಾರರಿಗೆ ಮಾರಕವಾಗುವಂತೆ ವಿದೇಶದ ಉತ್ಪನ್ನಗಳನ್ನು ಆಮದು ಮಾಡಿಕೊಂಡು ಇಲ್ಲಿನ ಗೋದಾಮು ಗಳನ್ನು ದಾಸ್ತಾನು ಕೇಂದ್ರವಾಗಿಸಿ ರುವದು ಕಾನೂನು ಬಾಹಿರವಾಗಿದೆ. ಇದರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಮಂಡಳಿ ನೇರವಾಗಿ ಶಾಮಿಲಾಗಿz.É ನಾವು ಓಟ್ ಮಾಡಿ ಕಳುಹಿಸಿದವರು ಕೊಡಗನ್ನು ಬಲಿ ಪಡೆಯುತ್ತಿದ್ದಾರೆ. ಈ ಅಕ್ರಮದಲ್ಲಿ ಪಾಲುದಾರರಾದ ಪ್ರತಿಯೊಬ್ಬರನ್ನೂ ಗಡೀಪಾರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗು ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಇಂದು ಜಿಲ್ಲೆಯಲ್ಲಿ ಪ್ರತಿಯೊಂದು ವಿಷಯಕ್ಕೂ ರಾಜಕೀಯ ನಂಟನ್ನು ತರುತ್ತಿರುವದು ದುರದೃಷ್ಟಕರ. ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯ ರಹಿತವಾಗಿ ಚಿಂತಿಸ ಬೇಕಾಗಿದೆ. ಜಿಲ್ಲೆಯಲ್ಲಿ ನಾವುಗಳು ಸಮಾಧಾನ ಮನಸ್ಥಿತಿಯನ್ನು ಬಿಡಬೇಕಾಗಿದೆ. ಮತದಾನದ ಮುಖಾಂತರ ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತಹ ಎದೆಗಾರಿಕೆಯನ್ನು ತೋರಬೇಕಾಗಿದೆ. ಈ ಎಲ್ಲ ಅವ್ಯವಹಾರ ಮತ್ತು ಅಕ್ರಮಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರ ನಿರ್ಲಕ್ಷ್ಯ, ಕರ್ತವ್ಯಲೋಪ ಹಾಗೂ ಕುಮ್ಮಕ್ಕಿನಿಂದ ನಡೆದಿರುವ ಸಂಶಯವಿದೆ. ಇಂತಹ ಅವ್ಯವಹಾರಗಳು ಕಳೆದ ಹಲವು ವರ್ಷದಿಂದ ನಡೆಯುತ್ತಿರುವ ಬಗ್ಗೆ ಸಂಶಯವಿದ್ದು, ಮಾಧ್ಯಮದ ಮೂಲಕ ನಾಮ ನಿರ್ದೇಶಕ ಸದಸ್ಯ ಮಾಳೇಟಿರ ಬೋಪಣ್ಣ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಕಡೇಮಾಡ ಕುಸುಮಾ ಜೋಯಪ್ಪ, ಅವರು ಬಹಿರಂಗ ಪಡಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಕಾನೂನು ಬಾಹಿರವಾಗಿ ಗೋಣಿಕೊಪ್ಪ ಕೃಷಿ ಮಾರುಕಟ್ಟೆ ಕೇಂದ್ರದೊಳಗೆ ಆಮದು ಮಾಡಿ ಕೊಂಡ ಕರಿಮೆಣಸಿನ ಪ್ರಮಾಣ ಎಷ್ಟೆಂಬದನ್ನು ತನಿಖೆ ನಡೆಸಿ ಪತ್ತೆ ಹಚ್ಚಬೇಕು. ಕಾನೂನು ಬಾಹಿರವಾಗಿ ಆಮದು ಮಾಡಿಕೊಂಡು ಕೇಂದ್ರದಿಂದ ಮಾರಾಟ ಮಾಡಿರುವ ಎಲ್ಲಾ ಕರಿಮೆಣಸುಗಳನ್ನು ಕಾನೂನು ಬಾಹಿರ ಮಾರಾಟವೆಂದು ಪರಿಗಣಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬೆಳೆಗಾರರ ಹಿತರಕ್ಷಣೆಗೆ ಎಲ್ಲಾ ಸಂಘ ಸಂಸ್ಥೆಗಳನ್ನು ಒಟ್ಟಿಗೆ ಸೇರಿಸಿ ಪ್ರತಿಭಟನೆ ಮಾಡುವಂತೆ ಸಲಹೆ ಮಾಡಿದರು.
ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ನಿಟ್ಟೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಚಂಗಡ ಉಮೇಶ್, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಬೆಳೆಗಾರ ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಪ್ರಮುಖರಾದ ಮಚ್ಚಮಾಡ ಅನೀಶ್ ಮಾದಪ್ಪ, ತಾಲೂಕು ಅಕ್ರಮ-ಸಕ್ರಮ ಸದಸ್ಯ ಕೊಲ್ಲೀರ ಬೋಪಣ್ಣ, ಮತ್ತಿತರರು ಮಾತನಾಡಿ, ಬೆಳೆಗಾರರಿಗೆ ಅನ್ಯಾಯ ಮಾಡಿರು ವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿದರು. ವೇದಿಕೆಯಲ್ಲಿ ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಜೇಮ್ಸ್ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಗೋಣಿಕೊಪ್ಪ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಆರ್‍ಎಂಸಿ ಮಾಜಿ ಸದಸ್ಯ ಪೋರ್ಕಂಡ ಬೋಪಣ್ಣ, ಬಾಳೆಲೆ ಕಾಂಗ್ರೆಸ್ ವಲಯಾಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಹುದಿಕೇರಿ ಕಾಂಗ್ರೆಸ್ ವಲಯಾಧ್ಯಕ್ಷ ಮಿದೇರಿರ ನವೀನ್, ಕುಟ್ಟ-ಬಾಡಗ ಕೊಡವ ವೇಲ್ ಫೇರ್ ಅಸೋಸಿಯೇಷನ್‍ನ ಅಧ್ಯಕ್ಷ ಬೊಳ್ಳೇರ ರಾಜ ಸುಬ್ಬಯ್ಯ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ತಮ್ಮು ಮುತ್ತಣ್ಣ, ತಾಲೂಕು ವೀರಶೈವ ಸಂಘಟನೆ ಮುಖಂಡ ಸಂದೀಪ್ ಮತ್ತಿತರರು ಹಾಜರಿದ್ದರು.
ದೂರು ದಾಖಲು
ಗೋಣಿಕೊಪ್ಪದಲ್ಲಿ ನಡೆದ ಬೆಳೆಗಾರರ ಸಭೆಯ ನಿರ್ಣಯದಂತೆ ಬೆಳೆಗಾರ ಒಕ್ಕೂಟದಿಂದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ದೂರಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಅವ್ಯವಹಾರ ಆಗಿರುವ ಸುಮಾರು 7 ಪುಟಗಳ ದಾಖಲೆಗಳನ್ನು ಲಗತ್ತಿಸಲಾಗಿದೆ.