ಶ್ರೀಮಂಗಲ, ಸೆ. 6: ಯುವಜನಾಂಗದ ಶಕ್ತಿಯ ಆಧಾರದಲ್ಲೇ ಭಾರತ ದೇಶವನ್ನು ಮುಂದುವರಿದ ದೇಶವನ್ನಾಗಿಸುವ ಸಂಕಲ್ಪ ಮಾಡಿರುವ ಹಿನ್ನೆಲೆಯಲ್ಲಿ ಯುವ ಜನಾಂಗವು ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಕರೆ ನೀಡಿದರು.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಕ್ರೀಡಾ ಅಕಾಡೆಮಿಯ ಆಶ್ರಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ನೆಮ್ಮಲೆ ಗ್ರಾಮದ ಕಕ್ಕಟ್ ಹೊಳೆಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ರ್ಯಾಪ್ಟಿಂಗ್ ಸಾಹಸ ಜಲಕ್ರೀಡೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ದೇಶವು ಪ್ರಪಂಚದಲ್ಲಿ ಅತಿ ಹೆಚ್ಚು ಯುವಜನಾಂಗವನ್ನು ಹೊಂದಿರುವ ದೇಶವಾಗಿದ್ದು, ಯುವ ಜನತೆಯನ್ನೇ ಆಧಾರವಾಗಿಟ್ಟುಕೊಂಡು 2020ನೇ ಇಸವಿಗೆ ಸದೃಢ ದೇಶವಾಗಬೇಕಾದರೆ ಯುವ ಜನಾಂಗವು ಮೊದಲು ಸದೃಢವಾಗಬೇಕಿದೆ. ಅದಕ್ಕಾಗಿ ಧೈರ್ಯ ಹಾಗೂ ಸಾಹಸವನ್ನು ಮೈಗೂಡಿಸಿಕೊಳ್ಳುವದು ಅತ್ಯಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಭಿರಾಧಿಕಾರಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಮಂದೆಯಂಡ ವನಿತ್ ಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ಶಿಬಿರದ ಸಂಯೋಜನಾಧಿಕಾರಿ ಡಾ. ಅಶ್ವಿನಿ ಶೆಟ್ಟಿ, ಶಿಬಿರದ ಸಹಾಯಕ ಅಧಿಕಾರಿ ವೇಣು ಗೋಪಾಲ್, ಶಿಬಿರದ ತರಬೇತುದಾರರಾದ ಕಿಶೋರ್, ಸುರೇಶ್, ಕಿರಣ್, ಸಂತೋಷ್, ಮನು, ಹಾಗೂ 50 ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಶಿಬಿರಾರ್ಥಿಗಳು ತರಬೇತಿ ಸಂಧರ್ಭ ತಮಗೆ ಆದ ಅನುಭವವನ್ನು ಹಂಚಿಕೊಂಡರು.