ಮಡಿಕೇರಿ, ಸೆ. 5: ಸೂಕ್ಷ್ಮ ಪರಿಸರ ವಲಯ ಮತ್ತು ಹುಲಿ ರಕ್ಷಣಾ ಯೋಜನೆಯನ್ನು ‘ಸೊನ್ನೆ’ಗೆ ಇಳಿಸಬೇಕು, ರೈಲ್ವೆ ಮಾರ್ಗ ಸಂಪರ್ಕ ಕುಶಾಲನಗರದವರೆಗೆ ಮಾತ್ರವಿದ್ದು, ರಾಷ್ಟ್ರೀಯ ಹೆದ್ದಾರಿಯ ವಿಸ್ತೀರ್ಣವನ್ನು ಕಡಿತಗೊಳಿಸುವಂತೆ ಕೊಡವ ಸಮಾಜಗಳ ಒಕ್ಕೂಟ ಸರ್ವಾನುಮತದಿಂದ ವಿರೋಧಿಸಿ ತೀರ್ಮಾನ ಕೈಗೊಂಡಿದೆ.ವೀರಾಜಪೇಟೆ ಹೊರ ವಲಯದ ಬಾಳುಗೋಡು ಕೊಡವ ಸಂಸ್ಕøತಿ ಕೇಂದ್ರದ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು. ಈಗಾಗಲೇ ಕೊಡಗು ಜಿಲ್ಲೆಯನ್ನು ಸೂಕ್ಷ್ಮ ಪರಿಸರ ವಲಯವನ್ನಾಗಿ ಘೋಷಿಸಿರುವದನ್ನು ಖಂಡಿಸಲಾಗು ವದು, ಅದರ ಮಿತಿಯನ್ನು ‘ಸೊನ್ನೆ’ ಪ್ರಮಾಣಕ್ಕೆ ಇಳಿಸಬೇಕು, ಇದರೊಂದಿಗೆ ಹುಲಿ ಯೋಜನೆ ಯನ್ನು ಕೂಡ ‘ಸೊನ್ನೆ’ಗಿಳಿಸಬೇಕೆಂದು ಆಗ್ರಹಿಸಲಾಯಿತು.

ಪ್ರಮುಖವಾಗಿ ಕೊಡಗಿಗೆ ರೈಲ್ವೆ ಮಾರ್ಗದ ಸಂಪರ್ಕವನ್ನು ಕೇವಲ ಕುಶಾಲನಗರದವರೆಗೆ ಮಾತ್ರ ತರಬೇಕೇ ಹೊರತು, ಯಾವದೇ ಕಾರಣಕ್ಕೂ ಕೊಡಗಿನೊಳಗೆ ಹಾದು ಹೋಗಲು ಬಿಡುವದಿಲ್ಲ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಕೊಡಗಿಗಾಗಿ ಹಾದು ಹೋಗುವದನ್ನು ಮುಕ್ತ ಕಂಠದಿಂದ ಸ್ವಾಗತಿಸುವದಾಗಿ ಸಮ್ಮತಿಸಿದ ಕೊಡವ ಸಮಾಜಗಳ ಒಕ್ಕೂಟವು, ಆದರೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಗಲವನ್ನು ಕಡಿಮೆಗೊಳಿಸಬೇಕು.

ಕೊಡಗು ಜಿಲ್ಲೆ ಭೌಗೋಳಿಕವಾಗಿ ಅತಿ ಸಣ್ಣ ಜಿಲ್ಲೆಯಾಗಿದ್ದು, ಈ ಜಿಲ್ಲೆಯೊಳಗೆ ಭಾರೀ ಅಗಲವುಳ್ಳ ಹಾಗೂ ಬೃಹತ್ ವಿಸ್ತೀರ್ಣವುಳ್ಳ ರಸ್ತೆಯನ್ನು ನಿರ್ಮಿಸಿದರೆ ಕೊಡಗಿನ ವಿಸ್ತೀರ್ಣ ತೀರಾ ಕ್ಷೀಣಿಸುವದರಿಂದ ಇರುವ ಜಮೀನುಗಳು ಹರಿದು ಹಂಚಿಹೋಗಲಿದೆ ಎಂಬ ತೀರ್ಮಾನಕ್ಕೆ ಬರಲಾಯಿತು.