ಮಡಿಕೇರಿ, ಸೆ.7 : ರಾಜ್ಯದಲ್ಲಿ ಅರಾಜಕತೆ ಮೂಡಲು ಕಾಂಗ್ರೆಸ್ ಸರಕಾರದ ದುರಾಡಳಿತ ಕಾರಣವೆಂದು ಆರೋಪಿಸಿರುವ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ರಾಜ್ಯ ಕಾಂಗ್ರೆಸ್ ಸರಕಾರ ಸಿಐಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರುಪ ಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿರುವದು ಸ್ವಾಗತಾರ್ಹವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತಪ್ಪಿದಲ್ಲಿ ರಾಜ್ಯಪಾಲರೇ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೇರಳ ರಾಜ್ಯದ ಮಾದರಿಯಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ದಮನ ಮಾಡುವ ಷಡ್ಯಂತ್ರ ನಡೆಯುತ್ತಿದೆ.
(ಮೊದಲ ಪುಟದಿಂದ) ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಅವರು ಕೇರಳ ಸರಕಾರದಂತೆ ಆಡಳಿತ ನಡೆಸಲು ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಸಲಹೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಯಾವದೇ ಬೆದರಿಕೆಗಳಿಗೆ ಅಂಜುವದಿಲ್ಲವೆಂದರು.
ಕರ್ನಾಟಕ ರಾಜ್ಯದ ಪ್ರತ್ಯೇಕ ಧ್ವಜ ರಚನೆಯ ಪ್ರಸ್ತಾಪದ ಮೂಲಕ ದೇಶದಲ್ಲಿ ಒಡಕು ಮೂಡಿಸಲು ಮುಂದಾಗಿದ್ದ ಕಾಂಗ್ರೆಸ್ ಸರಕಾರ ಇದೀಗ ಲಿಂಗಾಯಿತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯಲು ಮುಂದಾಗಿದೆ. ರಾಷ್ಟ್ರದಲ್ಲೇ ಅತಿಹೆಚ್ಚು ಭ್ರಷ್ಟಾಚಾರ ಕರ್ನಾಟಕದಲ್ಲಿ ನಡೆಯುತ್ತಿದೆ ಎನ್ನುವ ವಿಚಾರವೂ ಸಾಬೀತಾಗಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅಧಿಕಾರಿಗಳು ವಸೂಲಾತಿಯಲ್ಲಿ ತೊಡಗಿದ್ದಾರೆ. ವರ್ಗಾವಣೆಯಾದರೂ ಜಿಲ್ಲೆಯನ್ನು ಬಿಡಲೊಪ್ಪದ ಅಧಿಕಾರಿಗಳು ಭ್ರಷ್ಟ ವ್ಯವಸ್ಥೆಗೆ ಹೊಂದಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದ ಅವರು ಭ್ರಷ್ಟಾಚಾರವನ್ನು ನಿಯಂತ್ರಿಸದಿದ್ದಲ್ಲಿ ಬಿಜೆಪಿ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಸಭೆಯನ್ನೇ ನಡೆಸದಿರುವದರಿಂದ ಬಡ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಬಿಜೆಪಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ತಡೆಯೊಡ್ಡುವ ಮೂಲಕ ದಬ್ಬಾಳಿಕೆಯನ್ನು ನಡೆಸಿರುವ ರಾಜ್ಯ ಸರಕಾರ ತುರ್ತು ಪರಿಸ್ಥಿತಿಯನ್ನು ಹೇರಿದಂತೆ ವರ್ತಿಸುತ್ತಿದೆ ಎಂದು ಮನುಮುತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧ ಪಡದವರಿಂದ ಭೂಮಿ ಪೂಜೆ
ಶಾಸಕರುಗಳ ಮಾತು ಕೇಳಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಶಾಸಕರು ಚಾಲನೆ ನೀಡಬೇಕಾದ ಕಾಮಗಾರಿಗಳಿಗೆ ಸಚಿವರ ಆಪ್ತ ಕಾರ್ಯದರ್ಶಿ ಭೂಮಿ ಪೂಜೆ ನೆರವೇರಿಸುತ್ತಿದ್ದಾರೆ. ಇವರು ಕೊಡಗು ಜಿಲ್ಲೆಗೆ ಸಂಬಂಧಪಡದವರು ಎಂದು ಟೀಕಿಸಿದ ಮನುಮುತ್ತಪ್ಪ, ಜಿಲ್ಲೆಯಲ್ಲಿ ಅಧಿಕಾರ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿಯಲ್ಲಿದ್ದ ಸಣ್ಣಪುಟ್ಟ ಗೊಂದಲಗಳು ನಿವಾರಣೆಯಾಗಿದ್ದು, ಜಿಲ್ಲಾಧ್ಯಕ್ಷರು, ಶಾಸಕರು ಹಾಗೂ ಕಾರ್ಯಕರ್ತರು ಸಾಮರಸ್ಯದಿಂದ ಇದ್ದಾರೆ. ಮಡಿಕೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾಹಿತಿಯ ಕೊರತೆಯಿಂದ ಶಾಸಕರು ಪಾಲ್ಗೊಳ್ಳಲು ಸಾಧ್ಯವಾಗಿಲ್ಲವೆಂದು ಮನುಮುತ್ತಪ್ಪ ಸಮರ್ಥಿಸಿಕೊಂಡರು. ಕೆಲವು ಕಾರ್ಯಕರ್ತರ ವರ್ತನೆಯಿಂದ ಶಾಸಕರುಗಳಿಗೆ ಸ್ವಲ್ಪ ಬೇಸರವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಮಾತನಾಡಿ ಮುಂದಿನ ಒಂದು ತಿಂಗಳೊಳಗೆ ಭಾಗಮಂಡಲ ರಸ್ತೆಯನ್ನು ದುರಸ್ತಿ ಪಡಿಸಿ, ರಸ್ತೆಯ ಪಕ್ಕದ ಕಾಡುಗಳನ್ನು ತೆರವುಗೊಳಿಸದಿದ್ದಲ್ಲಿ ಲೋಕೋಪ ಯೋಗಿ ಇಲಾಖೆಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದರು.
ಕರಿಕೆ ಬಿಜೆಪಿಯಲ್ಲಿ ಯಾವದೇ ಗೊಂದಲಗಳಿಲ್ಲ, ಕೆಲವರು ಗೊಂದಲವನ್ನು ಸೃಷ್ಟಿಸಿಕೊಂಡಿದ್ದಾರೆ ಅಷ್ಟೆ. ಮನೆಯಲ್ಲಿ ಕುಳಿತು ರಾಜಕಾರಣ ಮಾಡಿದರೆ ಯಾರೂ ಕರೆದು ಪಕ್ಷದಲ್ಲಿ ಸ್ಥಾನಮಾನ ನೀಡಲು ಸಾಧ್ಯವಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರಕಳಗಿ ಹಾಗೂ ಕಾರ್ಯದರ್ಶಿ ರವಿಬಸಪ್ಪ ಉಪಸ್ಥಿತರಿದ್ದರು.