ಪೊನ್ನಂಪೇಟೆ, ಸೆ. 7: ದೇಶದಲ್ಲೇ ಮೊದಲ ಬಾರಿಗೆ ಹೋಬಳಿ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಪೊನ್ನಂಪೇಟೆಯ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ತುರ್ತಾಗಿ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಪೊನ್ನಂಪೇಟೆ ವಕೀಲರ ಸಂಘದ ನಿಯೋಗ ಸಚಿವರು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.ಪೊನ್ನಂಪೇಟೆ ವಕೀಲರ ಸಂಘದ ಅದ್ಯಕ್ಷÀ ಎಸ್.ಡಿ. ಕಾವೇರಪ್ಪ ಮತ್ತು ಗೌರವ ಕಾರ್ಯದರ್ಶಿ ಎಂ.ಟಿ. ಕಾರ್ಯಪ್ಪ ನೇತೃತ್ವದ ವಕೀಲರ ನಿಯೋಗ ಮೊದಲಿಗೆ ರಾಜ್ಯದ ಕಾನೂನು ಸÀಚಿವ ಟಿ.ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿತು. ಈ ವೇಳೆ ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ನಿರ್ಮಾಣಗೊಂಡಿರುವ ನೂತನ ನ್ಯಾಯಾಲಯ ಸಂಕೀರ್ಣದ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇತ್ತೀಚಿಗೆ ಧಾರವಾಡಕ್ಕೆ ತೆರಳಿ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಾದೀಶರಾದ ಬೂದಿಹಾಳ್ ಅವರನ್ನು ಭೇಟಿ ಮಾಡಿದ ಪೊನ್ನಂಪೇಟೆ ವಕೀಲರ ಸಂಘದ ನಿಯೋಗಕ್ಕೆ ಶೀಘ್ರದಲ್ಲೆ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲು ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದರೂ ಕಟ್ಟಡಕ್ಕೆ ಸಂಬಂಧಿಸಿದ ಮೂಲಸೌಕರ್ಯದ ಕೊರತೆ ಇದೆ ಎಂದು ಕಾನೂನು ಸಚಿವರ ಗಮನ ಸೆಳೆದ ನಿಯೋಗ, ಕೂಡಲೇ ಈ ಬಗ್ಗೆ ಸ್ಪಂದಿಸಿ ಅಗತ್ಯ ಕ್ರಮಕ್ಕೆ ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿತು.

ನಂತರ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರನ್ನು ಭೇಟಿ ಮಾಡಿ ನೂತನ ಐ.ಬಿ. ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನಸಿ ಪತ್ರ ಸಲ್ಲಿಸಿತು. ಅಲ್ಲದೇ ಇದೆ ಮನವಿ ಯನ್ನು ಪ್ರಧಾನ ಕಾರ್ಯದರ್ಶಿಯವರ ಮೂಲಕ ಲೋಕೊಪಯೋಗಿ ಸಚಿವರಿಗೂ ನೀಡಲಾಯಿತು.

ಬಳಿಕ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ನಿಯೋಗದಲ್ಲಿ ವಕೀಲರಾದ ಎಂ.ಎಂ. ಅಯ್ಯಪ್ಪ, ಮೋನಿ ಕಾಳಯ್ಯ ಮೊದಲಾದವರು ಇದ್ದರು.